ಬೆಳಗಾವಿ: ಕೊರೊನಾ ರೂಪಾಂತರಿ ಬಗ್ಗೆ ರಾಜ್ಯ ಸರ್ಕಾರ ಜನರಲ್ಲಿ ಅನಗತ್ಯವಾಗಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ಉಪ ನಾಯಕ ಯು.ಟಿ. ಖಾದರ್ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯು.ಟಿ. ಖಾದರ್, ಜನರಲ್ಲಿ ಧೈರ್ಯ ತುಂಬುವ ಬದಲು ಗೊಂದಲ ಸೃಷ್ಟಿಸುವ ಕೆಲಸವಾಗುತ್ತಿದೆ. ಯಾವ ದೇಶದಲ್ಲಿ ಕೋವಿಡ್ ನಿಂದ ಅಪಾಯವಾಗಿದೆ ಎಂಬುದನ್ನು ತಿಳಿಸಬೇಕು. ಚೀನಾದಲ್ಲಿನ ಕೋವಿಡ್ ಕುರಿತ ವಾಸ್ತವ ಸ್ಥಿತಿ ಏನು ಎಂಬುದನ್ನು ಸ್ಪಷ್ಟಪಡಿಸಬೇಕು. ಕೋವಿಡ್ ಬಗ್ಗೆ ಹರಡುತ್ತಿರುವ ಮಾಹಿತಿ ಸತ್ಯವೇ? ಎಂಬುದನ್ನು ತಿಳಿಸಿ BF.7 ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಚಳಿಗಾಲದಲ್ಲಿ ಕೆಲ ಸೋಂಕು ಬಂದು ಹೋಗುತ್ತದೆ. ರೂಪಾಂತರಿ ವೈರಸ್ ನಿಂದ ದೇಶದಲ್ಲಿ ಈವರೆಗೆ ಅನಾಹುತಗಳಾದ ಬಗ್ಗೆ ಮಾಹಿತಿ ಬಂದಿಲ್ಲ. WHO ಕೊಟ್ಟಿರುವ ಮಾಹಿತಿ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಬೇಕು. ಅದನ್ನು ಬಿಟ್ಟು ಹೆದರಿಸುವ ಕೆಲಸ ಮಾಡಬಾರದು. ಜನರಿಗೆ ಮುನ್ನೆಚ್ಚರಿಕೆ ವಹಿಸುವಂತೆ ಹೇಳಲಿ. ಆತ್ಮವಿಶ್ವಾಸ ತುಂಬಲಿ. ಮೊದಲು ಸರ್ಕಾರ ಆಕ್ಸಿಜನ್ ಪ್ಲಾಂಟ್ ಕ್ವಾಲಿಟಿ ಚೆಕ್ ಮಾಡಬೇಕು ಎಂದು ಹೇಳಿದರು.