ತಮ್ಮ ಸರ್ಕಾರದಲ್ಲಿ ಸಚಿವರಾಗಿದ್ದ ಏಕನಾಥ್ ಶಿಂಧೆ ಮತ್ತು ಪಕ್ಷದ ಶಾಸಕರ ಬಂಡಾಯದಿಂದಾಗಿ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದ ಶಿವಸೇನೆಯ ಉದ್ಧವ್ ಠಾಕ್ರೆ ಮತ್ತೊಂದು ಹಿನ್ನಡೆಯನ್ನು ಅನುಭವಿಸಿದ್ದರು. ಪಕ್ಷದ 18 ಸಂಸದರ ಪೈಕಿ 12 ಮಂದಿ ಏಕನಾಥ್ ಶಿಂದೆಯವರನ್ನು ಬೆಂಬಲಿಸಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಉದ್ಧವ್ ಠಾಕ್ರೆ ಅವರಿಗೆ ಹೊಸದೊಂದು ಸಂಕಷ್ಟ ಎದುರಾಗಿದೆ.
ಶಿವಸೇನೆಯ ಬಹುತೇಕ ಶಾಸಕರು, ಸಂಸದರು ತಮ್ಮದೇ ಪ್ರತ್ಯೇಕ ಬಣ ಮಾಡಿಕೊಂಡು ಮುಖ್ಯಮಂತ್ರಿ ಏಕನಾಥ್ ಶಿಂಧೆಯವರನ್ನು ಬೆಂಬಲಿಸುತ್ತಿದ್ದು, ನಮ್ಮದೇ ನಿಜವಾದ ಶಿವಸೇನೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ಶಿವಸೇನೆ ಪಕ್ಷದ ಚಿಹ್ನೆಯಾದ ಬಿಲ್ಲು ಬಾಣ ಕೈ ತಪ್ಪುವ ಭೀತಿ ಎದುರಾಗಿದೆ. ಏಕನಾಥ್ ಶಿಂಧೆ ಬಣ, ಪಕ್ಷದ ಮೇಲೆ ಹಿಡಿತ ಸಾಧಿಸಲು ಕಾನೂನು ಹೋರಾಟಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ.
ಉದ್ಧವ್ ಠಾಕ್ರೆ ಈ ಕುರಿತು ಈಗಾಗಲೇ ಸಂವಿಧಾನ ತಜ್ಞರೊಂದಿಗೆ ಸಮಾಲೋಚನೆ ನಡೆಸಿದ್ದಾರೆ ಎಂದು ಹೇಳಲಾಗಿದ್ದು, ಅವರುಗಳು ಶಾಸಕಾಂಗ ಪಕ್ಷ ವಿಭಜನೆಯಾದರೂ ಮೂಲ ಪಕ್ಷ ಹಾಗೇ ಉಳಿಯುತ್ತದೆ ಹೀಗಾಗಿ ಪಕ್ಷದ ಚಿಹ್ನೆ ಬಿಲ್ಲು ಮತ್ತು ಬಾಣ ನಿಮ್ಮ ಬಳಿಯೇ ಇರಲಿದೆ ಎಂದು ಹೇಳಿದ್ದಾರಂತೆ. ಆದರೆ ಕಾನೂನು ಹೋರಾಟದಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.