ರಾಜ್ಯದಲ್ಲಿ ಹಿಜಬ್ ವಿವಾದವು ತೀವ್ರಗೊಳ್ಳುತ್ತಿರುವುದರ ನಡುವೆಯೇ ರಾಜ್ಯ ಸರ್ಕಾರಿ ಖಾಸಗಿ ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳಿಂದ ಅದರಲ್ಲೂ ವಿಶೇಷವಾಗಿ 1 ರಿಂದ 10ನೇ ತರಗತಿಗೆ ದಾಖಲಾಗಿರುವ ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳ ದಾಖಲೆಯನ್ನು ಕಲೆ ಹಾಕಲು ಹೊರಟಿದೆ.
ಗುರುವಾರದಂದು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪಡೆದ ಅಂಕಿ ಅಂಶಗಳ ಪ್ರಕಾರ, ರಾಜ್ಯಾದ್ಯಂತ ವಿವಿಧ ಸರ್ಕಾರಿ ಶಾಲೆಗಳಲ್ಲಿ 17,39,742 ಮುಸ್ಲಿಂ ವಿದ್ಯಾರ್ಥಿಗಳಿದ್ದಾರೆ. ಬೆಂಗಳೂರು ದಕ್ಷಿಣದಲ್ಲಿ ಅತೀ ಹೆಚ್ಚು ಅಂದರೆ 1,55,104 ಅಲ್ಪಸಂಖ್ಯಾತ ವಿದ್ಯಾರ್ಥಿಗಳು, ಕಲಬುರಗಿಯಲ್ಲಿ 1,31,802 ವಿದ್ಯಾರ್ಥಿಗಳು ಹಾಗೂ ಬೆಂಗಳೂರು ಉತ್ತರದಲ್ಲಿ 1,22,993 ವಿದ್ಯಾರ್ಥಿಗಳು ಇದ್ದಾರೆ ಎಂದು ತಿಳಿದುಬಂದಿದೆ. ಚಾಮರಾಜನಗರದಲ್ಲಿ ಅತೀ ಕಡಿಮೆ ಅಂದರೆ 9603 ವಿದ್ಯಾರ್ಥಿಗಳು ಇದ್ದಾರೆ ಎಂದು ವರದಿಯಾಗಿದೆ.
ಬೆಂಗಳೂರಿನ ಕೆಲವು ಖಾಸಗಿ ಕಾಲೇಜುಗಳಲ್ಲಿಯೂ ಮುಸ್ಲಿಂ ವಿದ್ಯಾರ್ಥಿಗಳ ದಾಖಲೆಯನ್ನು ಸಲ್ಲಿಸುವಂತೆ ಸರ್ಕಾರ ಸೂಚನೆ ನೀಡಿದೆ ಎನ್ನಲಾಗಿದೆ. ಪ್ರಸ್ತುತ ರಾಜ್ಯದಲ್ಲಿ ಹೆಚ್ಚುತ್ತಿರುವ ಹಿಜಬ್ ವಿವಾದವನ್ನು ಗಮನದಲ್ಲಿಟ್ಟುಕೊಂಡು ಕಾಲೇಜುಗಳನ್ನು ಸೂಕ್ಷ್ಮ ವಲಯಗಳಾಗಿ ವರ್ಗೀಕರಿಸಿ ಅಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲು ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಸರ್ಕಾರ ಈ ಮಾಹಿತಿಯನ್ನು ಕಲೆ ಹಾಕುತ್ತಿದೆ ಎನ್ನಲಾಗಿದೆ.