ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಪೋಷಕರಿಂದ ಪ್ರತಿ ತಿಂಗಳು ನೂರು ರೂಪಾಯಿ ದೇಣಿಗೆ ಸಂಗ್ರಹಿಸಲು ಶಾಲಾಭಿವೃದ್ಧಿ ಸಮಿತಿ (SDMC) ಗಳಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಈ ಕುರಿತಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
ಈ ಮಾಹಿತಿ ಹೊರ ಬೀಳುತ್ತಿದ್ದಂತೆಯೇ ರಾಜ್ಯದಾದ್ಯಂತ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಕೂಡಲೇ ಈ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಬಡವರು ಹಾಗೂ ಕೂಲಿ ಕಾರ್ಮಿಕರ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಈ ರೀತಿ ದೇಣಿಗೆ ಸಂಗ್ರಹಿಸಲು ಮುಂದಾದರೆ ಅವರು ನೀಡುವುದಾದರೂ ಹೇಗೆ ಎಂಬ ಪ್ರಶ್ನೆ ಕೇಳಿ ಬರುತ್ತಿದೆ.
ದೇಣಿಗೆ ನೀಡುವುದು ಕಡ್ಡಾಯವಲ್ಲವೆಂದು ಮೂಲಗಳು ಹೇಳುತ್ತಿವೆಯಾದರೂ ದೇಣಿಗೆ ಸ್ವೀಕರಿಸುವ ಸರ್ಕಾರದ ನಿರ್ಧಾರವೇ ಸರಿಯಿಲ್ಲ ಎಂಬ ಮಾತುಗಳು ಈಗ ಕೇಳಿ ಬರುತ್ತಿವೆ. ಮಕ್ಕಳಿಗೆ ಶಿಕ್ಷಣ ನೀಡುವುದು ಮೂಲಭೂತ ಹಕ್ಕಾಗಿದ್ದು, ಆದರೆ ದೇಣಿಗೆ ಹೆಸರಿನಲ್ಲಿ ಅವರ ಹಕ್ಕನ್ನು ಮೊಟಕುಗೊಳಿಸಲು ಸರ್ಕಾರ ಮುಂದಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ದೇಣಿಗೆ ಸ್ವೀಕರಿಸುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತರ ಸುತ್ತೋಲೆಯನ್ನು ಹಿಂಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.