ಬೆಳಗಾವಿ: ವಿಧಾನಸಭೆಯಲ್ಲಿ ಸರ್ಕಾರಿ ಬಸ್ ಸಮಸ್ಯೆಯಿಂದ ಶಾಲಾ ಮಕ್ಕಳ ಪರದಾಟದ ಬಗ್ಗೆ ಪ್ರತಿದ್ವನಿಸಿದ್ದು, ಸಚಿವ ಶ್ರೀರಾಮುಲು ನೀಡಿದ ಉತರಕ್ಕೆ ವಿಪಕ್ಷ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಡಳಿತ ಹಾಗೂ ವಿಪಕ್ಷ ನಾಯಕರ ನಡುವೆ ಗದ್ದಲ-ಕೋಲಾಹಲ ಆರಂಭವಾಗಿ ಕಲಾಪವನ್ನೇ ಕೆಲಕಾಲ ಮುಂದೂಡಿದ ಘಟನೆ ನಡೆಯಿತು.
ಪ್ರಶ್ನೋತ್ತರ ಕಲಾಪ ಆರಂಭವಾಗುತ್ತಿದ್ದಂತೆ ಶಾಲಾ ಮಕ್ಕಳಿಗೆ ಬಸ್ ಸಮಸ್ಯೆಯಾಗುತ್ತಿದೆ ಎಂದು ತೇರದಾಳ ಶಾಸಕ ಸಿದ್ದು ಸವದಿ ವಿಷಯ ಪ್ರಸ್ತಾಪಿಸಿದರು. ಸಮಸ್ಯೆಯಿದ್ದರೆ ಬಸ್ ವ್ಯವಸ್ಥೆ ಕಲ್ಪಿಸುವುದಾಗಿ ಸಾರಿಗೆ ಸಚಿವ ಶ್ರೀರಾಮುಲು ತಿಳಿಸಿದರು.
ಸಚಿವರ ಉತ್ತರಕ್ಕೆ ಸಮಾಧಾನವಾಗದ ವಿಪಕ್ಷ ಸದಸ್ಯರು ರಾಜ್ಯದಲ್ಲಿ ಬಸ್ ಸಮಸ್ಯೆ, ರಸ್ತೆ ಗುಂಡಿ, ರಸ್ತೆ ಸಮಸ್ಯೆಯಿಂದಾಗಿ ಶಾಲಾ-ಕಾಲೇಜು ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂದು ಈ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿಲ್ಲ. ಇದು ಸರ್ಕಾರದ ವೈಫಲ್ಯ ಎಂದು ಕಾಂಗ್ರೆಸ್ ಸದಸ್ಯರು ಕಿಡಿಕಾರಿದರು. ಇದಕ್ಕೆ ಜೆಡಿಎಸ್ ಸದಸ್ಯರೂ ಧ್ವನಿಗೂಡಿಸಿದರು.
ಈ ವೇಳೆ ಮಾತನಾಡಿದ ಸಾರಿಗೆ ಸಚಿವ ಶ್ರೀರಾಮುಲು, ಕೊರೊನಾ ಮುಂಚೆ ಸಾರಿಗೆ ಬಸ್ ವ್ಯವಸ್ಥೆ ಇತ್ತು. ಕೊರೊನಾ ಬಳಿಕ ಕೆಲ ಕಡೆ ಬಸ್ ಇನ್ನೂ ಆರಂಭವಾಗಿಲ್ಲ. ಇನ್ನು ಕೆಲವೆಡೆ ರಸ್ತೆ ಮಾರ್ಗ ಸರಿಯಿಲ್ಲ ಹಾಗಾಗಿ ಸಮಸ್ಯೆಯಾಗಿದೆ. ಬಸ್ ಸಮಸ್ಯೆಯಾದರೆ ಬಸ್ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದರು. ಸಚಿವರ ಉಡಾಫೆ ಉತ್ತರಕ್ಕೆ ಗರಂ ಆದ ಕಾಂಗ್ರೆಸ್, ಜೆಡಿಎಸ್ ಸದಸರು ರಸ್ತೆ ಸರಿಯಿಲ್ಲ ಅದಕ್ಕೆ ಬಸ್ ವ್ಯವಸ್ಥೆ ಇಲ್ಲ ಎಂದರೆ ಹೇಗೆ? ಇದು ರಾಜ್ಯ ಸರ್ಕಾರದ ವೈಫಲ್ಯ ಎಂದು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಸದನದ ಬಾವಿಗಿಳಿದು ಪ್ರತಿಭಟನೆಗೆ ಮುಂದಾದರು. ಗದ್ದಲ-ಕೋಲಾಹಲ ಆರಂಭವಾದ ಹಿನ್ನೆಲೆಯಲ್ಲಿ ಸ್ಪೀಕರ್ ಪೀಠದಲ್ಲಿದ್ದ ಕುಮಾರ್ ಬಂಗಾರಪ್ಪ ಕಲಾಪವನ್ನು ಕೆಲ ಕಾಲ ಮುಂದೂಡಿದರು.