ದೇಶ-ವಿದೇಶಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚುತ್ತಲೇ ಇವೆ. ಎಷ್ಟೋ ಬಾರಿ ದೇಶದ ಭದ್ರತೆ ಮತ್ತು ಗೌಪ್ಯತೆಗೆ ಸಂಬಂಧಿಸಿದ ಮಾಹಿತಿಗಳು ಸೋರಿಕೆಯಾಗುವ ಅಪಾಯವಿರುತ್ತದೆ. ಹಾಗಾಗಿ ನಾರ್ಡ್ ವಿಪಿಎನ್, ಎಕ್ಸ್‌ಪ್ರೆಸ್ ವಿಪಿಎನ್ ಮತ್ತು ಟಾರ್‌ನಂತಹ ಕಂಪನಿಗಳು ನೀಡುವ ಥರ್ಡ್-ಪಾರ್ಟಿ ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್ (ವಿಪಿಎನ್) ಮತ್ತು ಅನಾಮಧೇಯ ಸೇವೆಗಳನ್ನು ಬಳಸದಂತೆ ಸರ್ಕಾರ ತನ್ನ ಉದ್ಯೋಗಿಗಳಿಗೆ ನಿರ್ಬಂಧ ಹೇರಿದೆ.
ಭಾರತದಲ್ಲಿ ವಿಪಿಎನ್ ಕಂಪನಿಗಳು ಹೇಗೆ ಕಾರ್ಯನಿರ್ವಹಿಸಬೇಕು ಎಂಬುದರ ಕುರಿತು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಸರ್ಟ್-ಇನ್) ನಿರ್ದೇಶನ ನೀಡಿತ್ತು. ಅದರ ಬೆನ್ನಲ್ಲೇ ದೇಶದಲ್ಲಿ ತಮ್ಮ ಸೇವೆಗಳನ್ನು ಸ್ಥಗಿತ ಮಾಡುವುದಾಗಿ ಎಕ್ಸ್‌ಪ್ರೆಸ್ ವಿಪಿಎನ್, ಸರ್ಫ್‌ಶಾರ್ಕ್ ಮತ್ತು ನಾರ್ಡ್ ವಿಪಿಎನ್ ಹೇಳಿದ್ದವು. ಇದಾದ ಕೆಲವೇ ದಿನಗಳಲ್ಲಿ ಸರ್ಕಾರದಿಂದ ಈ ಆದೇಶ ಹೊರಬಿದ್ದಿದೆ.
Google ಡ್ರೈವ್ ಅಥವಾ ಡ್ರಾಪ್‌ಬಾಕ್ಸ್‌ನಂತಹ ಯಾವುದೇ ಸರ್ಕಾರೇತರ ಕ್ಲೌಡ್ ಸೇವೆಯಲ್ಲಿ ಆಂತರಿಕ, ನಿರ್ಬಂಧಿತ ಅಥವಾ ಗೌಪ್ಯ ಸರ್ಕಾರಿ ಡೇಟಾ ಫೈಲ್‌ಗಳನ್ನು ಸೇವ್ ಮಾಡದಂತೆ ನೌಕರರಿಗೆ ಈಗಾಗ್ಲೇ ನಿರ್ದೇಶನ ನೀಡಲಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿನ ರಾಷ್ಟ್ರೀಯ ಮಾಹಿತಿ ಕೇಂದ್ರ (NIC), ಸರ್ಕಾರದ “ಭದ್ರತಾ ನಿಲುವು” ಸುಧಾರಿಸಲು ಮಾರ್ಗಸೂಚಿಗಳನ್ನು ಹಾಕಿಕೊಟ್ಟಿದೆ.
ಇದರ ಅಡಿಯಲ್ಲಿ ಹೊಸ ಆದೇಶ ಹೊರಬಿದ್ದಿದೆ. “ಸರ್ಕಾರಿ ನೌಕರರು ಮತ್ತು ಗುತ್ತಿಗೆ/ಹೊರಗುತ್ತಿಗೆ ಉದ್ಯೋಗಿಗಳನ್ನು ಸಂವೇದನಾಶೀಲಗೊಳಿಸುವುದು ಇದರ ಉದ್ದೇಶ. ಜೊತೆಗೆ ಸೈಬರ್ ಭದ್ರತಾ ದೃಷ್ಟಿಕೋನದಿಂದ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದರ ಕುರಿತು ಅವರಲ್ಲಿ ಜಾಗೃತಿ ಮೂಡಿಸಲು, ಈ ಮಾರ್ಗಸೂಚಿಗಳನ್ನು ಸಂಗ್ರಹಿಸಲಾಗಿದೆ. NIC, ಸರ್ಕಾರಿ ಉದ್ಯೋಗಿಗಳಿಗೆ ತಮ್ಮ ಮೊಬೈಲ್ ಫೋನ್‌ಗಳನ್ನು ‘ಜೈಲ್ ಬ್ರೇಕ್’ ಅಥವಾ ‘ರೂಟ್’ ಮಾಡಬೇಡಿ ಎಂದು ಸೂಚಿಸಿದೆ.
“ಆಂತರಿಕ ಸರ್ಕಾರಿ ದಾಖಲೆಗಳನ್ನು” ಸ್ಕ್ಯಾನ್ ಮಾಡಲು CamScanner ನಂತಹ ಯಾವುದೇ ಬಾಹ್ಯ ಮೊಬೈಲ್ ಅಪ್ಲಿಕೇಶನ್ ಆಧಾರಿತ ಸ್ಕ್ಯಾನರ್ ಸೇವೆಗಳನ್ನು ಬಳಸದಂತೆ ಸೂಚನೆ ನೀಡಿದೆ. ಜುಲೈ 2020ರಲ್ಲಿ ಸರ್ಕಾರ ನಿಷೇಧಿಸಿದ ಹಲವಾರು ಚೀನೀ ಅಪ್ಲಿಕೇಶನ್‌ಗಳಲ್ಲಿ CamScanner ಕೂಡ ಒಂದು. ನಿಷೇಧದ ಬಳಿಕವೂ ಇದು ಕೆಲವು ಆವೃತ್ತಿಗಳ ಮೂಲಕ ಕಾರ್ಯನಿರ್ವಹಿಸುತ್ತಿದೆ.
ಗಡಿ ಹಗೆತನ ಸೇರಿದಂತೆ ಅನೇಕ ರೀತಿಯ ಭದ್ರತಾ ಕಾಳಜಿಯ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ದೇಶಾದ್ಯಂತ ಸರ್ಕಾರಿ ಕಚೇರಿಗಳಲ್ಲಿ ಏಕರೂಪದ ಸೈಬರ್ ಭದ್ರತಾ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಸರ್ಕಾರದ ಭದ್ರತೆಗೆ ಸಂಬಂಧಪಟ್ಟ ಗೌಪ್ಯತೆಯನ್ನ ಕಾಯ್ದುಕೊಳ್ಳಬಹುದು ಎಂದು ನೌಕರರಿಗೆ ನಿರ್ದೇಶನ ನೀಡಲಾಗಿದೆ.