ಸರ್ಕಾರಿ ನೌಕರರ ಮೂರು ದಶಕಗಳ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿದೆ. ಉದ್ಯೋಗಿಗಳ ಬಹುಕಾಲದ ಬೇಡಿಕೆಯಾದ ಆಸ್ಪತ್ರೆಗಳಲ್ಲಿ ನಗದು ರಹಿತ ಆರೋಗ್ಯ ಸೇವೆ ಯೋಜನೆ ಆರಂಭಕ್ಕೆ ಈಗ ಕಾಲ ಕೂಡಿ ಬಂದಿದ್ದು, ಸೆಪ್ಟೆಂಬರ್ 6 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದಾರೆ.
ಈ ಯೋಜನೆಗೆ ವಾರ್ಷಿಕ 1250 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಹೇಳಲಾಗಿದ್ದು, ಸರ್ಕಾರಿ ನೌಕರರು ಸಹ ಇದಕ್ಕಾಗಿ ದೇಣಿಗೆಯನ್ನು ಪಾವತಿಸಬೇಕಾಗುತ್ತದೆ. ಮೂಲ ವೇತನದ ಶೇ.1ರಷ್ಟು ಮೊತ್ತ ಕಡಿತಗೊಳ್ಳಲಿದ್ದು, ಈ ರೀತಿ ಸಂಗ್ರಹವಾಗುವ 200 ಕೋಟಿ ರೂಪಾಯಿಗಳನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಗೆ ವರ್ಗಾಯಿಸಲಾಗುತ್ತದೆ. ಅಲ್ಲಿಂದಲೇ ಆಸ್ಪತ್ರೆಗಳಿಗೆ ಹಣ ಪಾವತಿಯಾಗಲಿದೆ ಎಂದು ಹೇಳಲಾಗಿದೆ.
1,000ಕ್ಕೂ ಅಧಿಕ ರೋಗಗಳಿಗೆ ನಗದು ರಹಿತ ಚಿಕಿತ್ಸೆ ಲಭ್ಯವಾಗಲಿದ್ದು, ಈಗಾಗಲೇ 500ಕ್ಕೂ ಹೆಚ್ಚು ಆಸ್ಪತ್ರೆಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಹೊರರೋಗಿಗಳಿಗೂ ಉಚಿತ ಚಿಕಿತ್ಸೆ ಲಭ್ಯವಾಗುತ್ತದೆ ಎಂದು ತಿಳಿದು ಬಂದಿದೆ. ಈ ಮೊದಲು ಸರ್ಕಾರಿ ನೌಕರರು ಖಾಯಿಲೆಗೆ ಬಿದ್ದ ಸಂದರ್ಭದಲ್ಲಿ ಕೈಯಲ್ಲಿ ಹಣವಿಲ್ಲದಿದ್ದರೆ ಸಂಕಷ್ಟ ಎದುರಿಸಬೇಕಾಗಿತ್ತು. ಸಾಲಸೋಲ ಮಾಡಿಕೊಂಡು ಚಿಕಿತ್ಸೆ ಪಡೆದ ಬಳಿಕ ಮರು ಪಾವತಿಗಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡಬೇಕಾಗಿತ್ತು. ಈಗ ನಗದು ರಹಿತ ಚಿಕಿತ್ಸೆ ಲಭ್ಯವಾಗುವುದರಿಂದ ಈ ಎಲ್ಲ ಸಮಸ್ಯೆಗಳಿಗೆ ಅಂತ್ಯ ಹಾಡಿದಂತಾಗಿದೆ.