ಮೂರ್ನಾಲ್ಕು ದಿನಗಳಿಂದ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಪೋಸ್ಟರ್ ಸಮರ ನಡೆಯುತ್ತಿದೆ. ಕಾಂಗ್ರೆಸ್ ನವರ ‘ಪೇ ಸಿಎಂ’ಪೋಸ್ಟರ್ ಬಳಿಕ ಬಿಜೆಪಿಯವರು ‘ರೀಡೂ ಸಿದ್ದರಾಮಯ್ಯ’ ‘ಇಡಿ ಡಿಕೆಶಿ’ ಪೋಸ್ಟರ್ ಪ್ರದರ್ಶಿಸಿದ್ದರು.
ಇದರ ಮಧ್ಯೆ ‘ಪೇ ಸಿಎಂ’ ಪೋಸ್ಟರ್ ವಿರುದ್ಧ ಬಿಬಿಎಂಪಿ ದೂರು ದಾಖಲಿಸಿದ ಬೆನ್ನಲ್ಲೇ ಕಾಂಗ್ರೆಸ್ ನ ಕೆಲ ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಇದೀಗ ಸರ್ಕಾರಕ್ಕೆ ಸವಾಲು ಒಡ್ಡುವಂತೆ ಕಾಂಗ್ರೆಸ್ ವತಿಯಿಂದ ಸರ್ಕಾರಿ ಕಚೇರಿ ಗೋಡೆ ಮೇಲೆ ಪೇ ಸಿಎಂ ಪೋಸ್ಟರ್ ಅಂಟಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಪಕ್ಷದ ಶಾಸಕರಿಗೆ ಕೆಪಿಸಿಸಿ ಕಚೇರಿಗೆ ಬರುವಂತೆ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.