ಸರ್ಕಾರಿ ಕಚೇರಿಗಳಲ್ಲಿ ಲಂಚವಿಲ್ಲದೆ ಯಾವುದೇ ಕೆಲಸ ಆಗುವುದಿಲ್ಲ ಎಂಬ ಮಾತುಗಳಿವೆ. ಇದಕ್ಕೆ ವ್ಯತಿರಿಕ್ತವಾದ ವಿಚಾರಗಳು ಇದ್ದರೂ ಸಹ ಅದು ಕೇವಲ ಬೆರಳೆಣಿಕೆಯಷ್ಟು. ಇದೀಗ ರಾಜ್ಯ ಹೈಕೋರ್ಟ್ ಸಹ ಸರ್ಕಾರಿ ಕಚೇರಿಗಳಲ್ಲಿನ ಲಂಚದ ಹಾವಳಿ ಕುರಿತು ಕಳವಳ ವ್ಯಕ್ತಪಡಿಸಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿಯೇ ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಈ ಹಿಂದಿನ ಬೆಂಗಳೂರು ಜಿಲ್ಲಾಧಿಕಾರಿ ಜೆ. ಮಂಜುನಾಥ್ ಅವರ ಜಾಮೀನು ಅರ್ಜಿ ವಿಚಾರಣೆ ವೇಳೆ ಈ ಕುರಿತು ಕಳವಳ ವ್ಯಕ್ತಪಡಿಸಿದ ನ್ಯಾಯಾಲಯ, ಅಧಿಕೃತ ಕೆಲಸಗಳಿಗೆ ಲಂಚ ಪಡೆಯುವುದೇ ಸರ್ಕಾರಿ ಕಚೇರಿಗಳಲ್ಲಿ ನಿಯಮ ಎಂಬಂತೆ ಆಗಿದೆ. ಇದು ಕ್ಯಾನ್ಸರ್ ಗಿಂತಲೂ ಗಂಭೀರವಾಗಿದೆ ಎಂದು ಹೇಳಿದೆ.
ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಪೀಠ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಅಲ್ಲದೆ ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಕಠಿಣ ಶಬ್ದಗಳಿಂದ ಟೀಕಿಸಿದೆ. ಇದೇ ಸಂದರ್ಭದಲ್ಲಿ ಜೆ. ಮಂಜುನಾಥ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ.