ರಾಮನಗರ: ಹುಷಾರಿಲ್ಲ ಎಂದರೆ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕು. ಹುಷಾರಿದ್ದವರೂ ಟೆಸ್ಟ್ ಮಾಡಿಸಿಕೊಳ್ಳಬೇಕು ಎಂಬುದು ಯಾವ ನ್ಯಾಯ? ಡಿ.ಕೆ. ಶಿವಕುಮಾರ್ 15 ಕಿ.ಮೀ. ನಡೆದರೂ ಅವರು ಆರಾಮವಾಗಿದ್ದಾರೆ. ಅಂದರೂ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಹೇಳುತ್ತಿರುವುದು ಎಷ್ಟು ಸರಿ? ಎಂದು ಸಂಸದ ಡಿ.ಕೆ. ಸುರೇಶ್ ಪ್ರಶ್ನಿಸಿದ್ದಾರೆ.
ಕೋವಿಡ್ ಟೆಸ್ಟ್ ಗೆ ಡಿ.ಕೆ. ಶಿವಕುಮಾರ್ ನಿರಾಕರಿಸಿದ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಸುರೇಶ್, ಸರ್ಕಾರವೇ ಕೊರೊನಾ ಸೋಂಕಿತ ವ್ಯಕ್ತಿಯನ್ನು ಕಳುಹಿಸಿ ಪಾದಯಾತ್ರೆಯಲ್ಲಿ ಸೋಂಕು ಹರಡಿಸಲು ಯತ್ನಿಸುತ್ತಿದೆ. ಮೊದಲಿನಿಂದಲೂ ಪಾದಯಾತ್ರೆ ನಿಲ್ಲಿಸುವ ಉದ್ದೇಶಕ್ಕೆ ಮುಂದಾಗಿದ್ದ ಸರ್ಕಾರ ಈಗ ಇಂತಹ ಷಡ್ಯಂತ್ರ ನಡೆಸಿದೆ ಎಂದು ವಾಗ್ದಾಳಿ ನಡೆಸಿದರು.
ಡಿ.ಕೆ. ಶಿವಕುಮಾರ್ ಅವರಿಗೆ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ, ಸರ್ಕಾರವೇ ನಮ್ಮನ್ನು ಕಳುಹಿಸಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿಯಿಂದ ಆಗಮಿಸಿದ್ದ ಅಧಿಕಾರಿಯೇ ಕೊರೊನಾ ಸೋಂಕಿತ ವ್ಯಕ್ತಿ. ನನಗೆ ಬಂದಿರುವ ಮಾಹಿತಿ ಪ್ರಕಾರ ಆ ಅಧಿಕಾರಿಗೆ ಕೊರೊನಾ ಪಾಸಿಟಿವ್ ಇದೆ. ಸರ್ಕಾರ ಉದ್ದೇಶಪೂರ್ವಕವಾಗಿ ಸೋಂಕಿತ ಅಧಿಕಾರಿಯನ್ನು ಕಳುಹಿಸಿ ಡಿ.ಕೆ. ಶಿವಕುಮಾರ್ ಅವರಿಗೆ ಕೊರೊನಾ ತಗುಲಿಸಲು ಯತ್ನ ನಡೆಸಿದೆ ಎಂದು ಆರೋಪಿಸಿದ್ದಾರೆ.
ಅಷ್ಟೇ ಅಲ್ಲ ಪಾದಯಾತ್ರೆಯಲ್ಲಿ ಹಾಗೂ ಇತರೆಡೆ ಕೊರೊನಾ ಹರಡಲು ಸರ್ಕಾರವೇ ಹೊಣೆ. ಕೊರೊನಾ ಇರುವ ವ್ಯಕ್ತಿಯನ್ನೇ ಎಲ್ಲೆಡೆ ಕಳುಹಿಸಿ ತಾವೇ ಕೊರೊನಾ ಹಬ್ಬಿಸಿ ನಮ್ಮ ಮೇಲೆ ಆರೋಪಿಸಲು ಹೊರಟಿದ್ದಾರೆ. ನಿಜ ಹೇಳಬೇಕೆಂದರೆ ಕೊರೊನಾ ಹರಡುವಂತೆ ಮಾಡುತ್ತಿರುವವರೇ ಬಿಜೆಪಿಯವರು. ಕೋವಿಡ್ ಕೇಸ್ ರಾಜ್ಯದಲ್ಲಿ ಉಲ್ಬಣವಾದರೆ ಇದಕ್ಕೆ ಸರ್ಕಾರವೇ ನೇರ ಹೊಣೆ ಎಂದು ಹೇಳಿದರು.
ನಾವು ಮಾಡುತ್ತಿರುವುದು ರಾಜಕೀಯ ಕಾರ್ಯಕ್ರಮವಲ್ಲ. ರೈತರಿಗಾಗಿ, ಕುಡಿಯುವ ನೀರಿಗಾಗಿ ನಾವು ಹೋರಾಡುತ್ತಿದ್ದೇವೆ. ಅನಗತ್ಯವಾಗಿ ಸರ್ಕಾರ ನಮ್ಮ ವಿರುದ್ಧ ಎಫ್ಐಆರ್ ದಾಖಲಿಸಿದೆ. ಈ ಬಗ್ಗೆ ನ್ಯಾಯಾಲಯದಲ್ಲಿ ನಾವು ಸ್ಪಷ್ಟನೆ ನೀಡುತ್ತೇವೆ ಎಂದು ಹೇಳಿದರು.