ಬೆಂಗಳೂರು: ಕಾಂಗ್ರೆಸ್ ನಾಯಕರು ಚುನಾವಣಾ ಪೂರ್ವದಲ್ಲಿ ಕೊಟ್ಟ ಭರವಸೆಯಂತೆ ನಡೆದುಕೊಂಡಿಲ್ಲ. ಗ್ಯಾರಂಟಿ ಯೋಜನೆಯನ್ನು ಜಾರಿಗೆ ತರುವಲ್ಲಿ ವಿಫಲರಾಗಿದ್ದಾರೆ. ಸರ್ಕಾರದ ವಿರುದ್ಧ ಜುಲೈ 4ರಿಂದ ಬಿಜೆಪಿ ಧರಣಿ ಆರಂಭಿಸಲಿದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಎಸ್. ಯಡಿಯೂರಪ್ಪ, ಕಾಂಗ್ರೆಸ್ ನಾಯಕರು ಹೇಳಿದ್ದೊಂದು ಈಗ ಮಾಡುತ್ತಿರುವುದು ಒಂದು. 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿ ಅಕ್ಕಿ ಕೊಟ್ಟಿಲ್ಲ, ಕೇಂದ್ರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಎಲ್ಲಾ ಬಿಜೆಪಿ ಶಾಸಕರು ಜುಲೈ 4ರಿಂದ ಸದನದ ಒಳಗೂ ಹಾಗೂ ಹೊರಗೂ ಧರಣಿ ನಡೆಸುತ್ತೇವೆ ಎಂದರು.
ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಮನೆ ಮನೆಗೆ ತೆರಳಿ ಸಹಿ ಮಾಡಿ ಜನರಿಗೆ ನೀಡಿದ ಗ್ಯಾರಂಟಿ ಕಾರ್ಡ್ ಯೋಜನೆಯನ್ನು ಮೊದಲು ಜಾರಿಗೆ ತರಬೇಕು. ಗ್ಯಾರಂಟಿ ಜಾರಿ ಮಾಡದಿದ್ದರೆ ನಾವು ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಒಂದು ದಿನ ಧರಣಿ ಸತ್ಯಾಗ್ರಹ ಮಾಡುತ್ತೇವೆ. ಬೆಳಿಗ್ಗೆಯಿಂದ ಸಂಜೆ ಕಾರ್ಯಕರ್ತರ ಜೊತೆ ಸತ್ಯಾಗ್ರಹ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.