ಬೆಳಗಾವಿ: ಸ್ವತಃ ಸಿಎಂ ಬಸವರಾಜ್ ಬೊಮ್ಮಾಯಿ, ಜಾರಕಿಹೊಳಿ ಸಹೋದರರ ತವರು ಜಿಲ್ಲೆ ಬೆಳಗಾವಿಯಲ್ಲಿ ಎರಡು ದಿನಗಳಿಂದ ಪ್ರವಾಸ ಕೈಗೊಂಡಿದ್ದರೂ ಶಾಸಕರಾದ ರಮೇಶ್ ಜಾರಕಿಹೊಳಿಯಾಗಲಿ, ಬಾಲಚಂದ್ರ ಜಾರಕಿಹೊಳಿಯಾಗಲಿ ಸಿಎಂ ಕಾರ್ಯಕ್ರಮದಲ್ಲಿ ಭಾಗಿಯೂ ಆಗಿಲ್ಲ, ಭೇಟಿಯಾಗಿ ಮಾತುಕತೆ ಕೂಡ ನಡೆಸಿಲ್ಲ. ಸಚಿವ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಸಹೋದರರು ಈ ಮೂಲಕ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ಸಾರಿದ್ದಾರೆ.
ಹಿ.ಪ್ರದೇಶದ ಕಾಜಾದಲ್ಲಿದೆ ವಿಶ್ವದ ಅತಿ ಎತ್ತರದ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರ
ಜಾರಕಿಹೊಳಿ ಸಹೋದರರ ಅಸಮಾಧಾನದ ಬಗ್ಗೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಜಾರಕಿಹೊಳಿ ಸಹೋದರರು ಭೇಟಿಯಾಗದಿದ್ದರೆ ಸಮಸ್ಯೆಯಿಲ್ಲ. ನನ್ನ ಭೇಟಿಗೆ ಬರುವುದಿಲ್ಲ ಎಂದು ಆಗಲೇ ಅವರು ತಿಳಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಚಂದ್ರ ಜಾರಕಿಹೊಳಿ ಪತ್ರ ಬರೆದಿದ್ದಾರೆ. ನನ್ನ ಹಾಗೂ ಜಾರಕಿಹೊಳಿ ಸಹೋದರರ ನಡುವೆ ಯಾವುದೇ ಸಮಸ್ಯೆಗಳಿಲ್ಲ ಎಂದು ಹೇಳಿದರು.
ಇದೇ ವೇಳೆ ಗಡಿ ರಕ್ಷಣಾ ಆಯೋಗವನ್ನು ಮತ್ತಷ್ಟು ಬಲ ಪಡಿಸುತ್ತೇವೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಇನ್ನು ಸರ್ಕಾರ ಟೇಕ್ ಆಫ್ ಆಗಿಲ್ಲ ಎಂಬ ಕಾಂಗ್ರೆಸ್ ನಾಯಕರ ಟೀಕೆಗೆ ಉತ್ತರಿಸಿದ ಸಿಎಂ ಸರ್ಕಾರ ಟೇಕ್ ಆಫ್ ಆಗಿ ಬಹಳ ದಿನವಾಗಿದೆ ಎಂದು ಟಾಂಗ್ ನೀಡಿದರು.