ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ ರಾಜ್ಯ ಸರ್ಕಾರ ಘೋಷಣೆ ಮಾಡಿರುವ 2D ಮೀಸಲಾತಿ ಕ್ರಮದ ವಿರುದ್ಧ ಸಮುದಾಯದ ಮುಖಂಡರು ಸಿಡಿದೆದ್ದಿದ್ದು, ಪಂಚಮಸಾಲಿ ಸಮುದಾಯದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ವಿಜಯಾನಂದ ಕಾಶಪ್ಪನವರ್ ರಾಜೀನಾಮೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್, ನಿನ್ನೆ ಸರ್ಕಾರ 2D ಎಂಬ ಹೆಸರು ನೀಡಿ ಪಂಚಮಸಾಲಿ ಸಮುದಾಯಕ್ಕೆ ಕೇವಲ 7%ರಷ್ಟು ಮೀಸಲಾತಿ ಘೋಷಣೆ ಮಾಡಿದೆ. ನಾವು ಶೇ.15ರಷ್ಟು ಮೀಸಲಾತಿ ಕೇಳಿದ್ದೆವು. ಆದರೆ ಸರ್ಕಾರ ನೀಡಿದ್ದು ಕೇವಲ ಶೇ.7ರಷ್ಟು ಮಾತ್ರ. ನಾವು ಕೇಳಿದಷ್ಟು ಮೀಸಲಾತಿ ಕೊಟ್ಟರೆ ಮಾತ್ರ ಒಪ್ಪುತ್ತೇವೆ ಎಂದಿದ್ದಾರೆ.
ಸರ್ಕಾರದ ಈ ನಿರ್ಧಾರವನ್ನು ಒಪ್ಪಲು ಸಾಧ್ಯವಿಲ್ಲ. ಸಿಎಂ ಬೊಮ್ಮಾಯಿ ಸರ್ಕಾರ ಚುನವಣಾ ತಂತ್ರ ಮಾಡುತ್ತಿದೆ. ಸರ್ಕಾರದ ನಿರ್ಧಾರ ಬೇಸರ ತಂದಿದೆ. ಪಂಚಮಸಾಲಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆ.