ಉಡುಪಿ: ಏಕರೂಪ ಸಮವಸ್ತ್ರ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದರೂ ಕೂಡ ಉಡುಪಿ, ಕುಂದಾಪುರ ಕಾಲೇಜುಗಳಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಮುಂದುವರೆದಿದ್ದು, ಇಂದು ಕೂಡ ಕೆಲ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಹಿಜಾಬ್, ಕೇಸರಿ ಶಾಲು ಧರಿಸಿ ಕಾಲೇಜಿಗೆ ಎಂಟ್ರಿ ಕೊಟ್ಟಿದ್ದಾರೆ.
ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 22 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದು, ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಲಾಗಿದೆ. ಹಿಜಾಬ್ ತೆಗೆದು ತರಗತಿಗಳಿಗೆ ಬರುವಂತೆ ಪ್ರಾಂಶುಪಾಲರು ಸೂಚಿಸಿದ್ದಾರೆ. ಆದರೆ ಇದಕ್ಕೆ ಒಪ್ಪದ ವಿದ್ಯಾರ್ಥಿನಿಯರು ಹಿಜಾಬ್ ತೆಗೆಯಲ್ಲ, ನಮ್ಮ ಮನೆಯಲ್ಲಿ ಹೇಳಿಕಳುಹಿಸಿದ್ದಾರೆ. ಕೋರ್ಟ್ ತೀರ್ಪು ಬರುವವರೆಗೂ ಹಿಜಾಬ್ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳ ಮೊಬೈಲ್ ಗಳನ್ನು ಕಾಲೇಜು ಸಿಬ್ಬಂದಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನು ಉಡುಪಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿಯೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಿದ್ದು, ವಿದ್ಯಾರ್ಥಿಗಳಿಗೆ ಕೆಸರಿ ಶಾಲು ತೆಗೆಯುವಂತೆ ಸೂಚಿಸಲಾಗಿದೆ.
ಉಡುಪಿ, ಕುಂದಾಪುರ ಬಳಿಕ ಇದೀಗ ಮಂಡ್ಯ ಜಿಲ್ಲೆಯ ಕಾಲೇಜುಗಳಿಗೂ ವಿವಾದ ಕಾಲಿಟ್ಟಿದ್ದು, ಸರ್ಕಾರಿ ಕಾಲೇಜಿನ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದಿದ್ದಾರೆ. ಕಾಲೇಜು ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ಕೇಸರಿ ಶಾಲು ತೆಗೆಯುವಂತೆ ಸೂಚಿಸಿದ್ದಾರೆ. ತರಗತಿಗಳಲ್ಲಿ ಅನಗತ್ಯ ವಿವಾದ ಮಾಡಬೇಡಿ, ಸಮವಸ್ತ್ರ ಸೂಚಿಸಿರುವಾಗ ಇಂತಹ ನಡೆ ಸರಿಯಲ್ಲ, ಸರ್ಕಾರದ ಆದೇಶ ಪಾಲಿಸುವಂತೆ ಬುದ್ಧಿವಾದ ಹೇಳಿದ್ದಾರೆ.