ಬೆಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಆಯೋಜಿಸಿದ್ದ ಜನೋತ್ಸವ ಕಾರ್ಯಕ್ರಮ ರದ್ದು ಪಡಿಸಲಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿಎಂ ಬೊಮ್ಮಾಯಿ, ಪ್ರವೀಣ್ ನೆಟ್ಟಾರು ಹತ್ಯೆಯಿಂದಾಗಿ ಪತ್ನಿ, ತಾಯಿ ಕುಟುಂಬದವರೆಲ್ಲರೂ ದುಃಖದಲ್ಲಿ ಮುಳುಗಿದ್ದಾರೆ. ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನ ಬರ್ಬರ ಹತ್ಯೆಯಾಗಿರುವುದು ಖಂಡನೀಯ ಇಂತಹ ಸಂದರ್ಭದಲ್ಲಿ ಸರ್ಕಾರದ ಒಂದು ವರ್ಷದ ಸಾಧನೆ ಬಗ್ಗೆ ಕಾರ್ಯಕ್ರಮ ನಡೆಸುವುದು ಸರಿಯಲ್ಲ ಎಂಬ ಕಾರಣಕ್ಕೆ ದೊಡ್ಡಬಳ್ಳಾಪುರದಲ್ಲಿ ಇಂದು ಆಯೊಜಿಸಿದ್ದ ಜನೋತ್ಸವ ಕಾರ್ಯಕ್ರಮ ರದ್ದುಗೊಳಿಸಲು ಸೂಚಿಸಲಾಗಿದೆ ಎಂದರು.
ಕಾರ್ಯಕ್ರಮ ರದ್ದು ಪಡಿಸಲು ಈಗಾಗಲೇ ತಿಳಿಸಲಾಗಿದೆ. ಆದರೆ ಸರ್ಕಾರದ ಒಂದು ವರ್ಷ ಮಾಡಿದ ಕೆಲಸಗಳ ಬಗ್ಗೆ ಜನರಿಗೆ ಮಾಹಿತಿ ನೀಡುವುದು ನಮ್ಮ ಜವಾಬ್ದಾರಿ ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯರೂಪಕ್ಕೆ ತಂದ ಕೆಲಸಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸುವುದಾಗಿ ತಿಳಿಸಿದರು.
ಯುವಕರಿಗೆ ಉದ್ಯೋಗ ಕೊಡುವ ನಿಟ್ಟಿನಲ್ಲಿ ಯೋಜನೆ ಜಾರಿಗೊಳಿಸಿದ್ದೇವೆ. ಸ್ಲಂ ನಿಂದ 84 ಸಾವಿರ ಮನೆಗಳನ್ನು ಕಟ್ಟಲು ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರಿನ ಅಭಿವೃದ್ಧಿಗೆ ನಮ್ಮ ಸರ್ಕಾರದಿಂದ ಹೆಜ್ಜೆ ಇಡಲಾಗಿದೆ. ಹೆಬ್ಬಾಳ, ಗೊರಗುಂಟೆಪಾಳ್ಯ ಫ್ಲೈಓವರ್ ಗೆ ಯೋಜನೆ ರೂಪಿಸಲಾಗಿದೆ. 8 ಸಾವಿರ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗಿದೆ. ನೀರಾವರಿ, ಮಹಿಳಾ, ಮಕ್ಕಳ ಕಲ್ಯಾಣಕ್ಕೆ ಹಣ ಮೀಸಲಿಡಲಾಗಿದೆ, ಸ್ವಯಂ ಉದ್ಯೋಗ ನೀಡುವ ನಿಟ್ಟಿನಲ್ಲಿ ಸಾಲಸೌಲಭ್ಯ ಒದಗಿಸಲಾಗುತ್ತಿದೆ 750 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಭಿವೃದ್ಧಿ ಮಾಡಲಾಗಿದೆ ಎಂದು ವಿವರಿಸಿದರು.