alex Certify BIG NEWS: ಸರ್ಕಾರಕ್ಕೆ ಮಾನ, ಮರ್ಯಾದೆ ಇಲ್ವಾ…….? ಡಿ.ಕೆ.ಶಿ ಪ್ರಶ್ನೆ; ಸಿಎಂ ಬೊಮ್ಮಾಯಿ ರಾಜೀನಾಮೆ ನೀಡಲಿ ಎಂದ ವಿಪಕ್ಷ ನಾಯಕ ಸಿದ್ದರಾಮಯ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸರ್ಕಾರಕ್ಕೆ ಮಾನ, ಮರ್ಯಾದೆ ಇಲ್ವಾ…….? ಡಿ.ಕೆ.ಶಿ ಪ್ರಶ್ನೆ; ಸಿಎಂ ಬೊಮ್ಮಾಯಿ ರಾಜೀನಾಮೆ ನೀಡಲಿ ಎಂದ ವಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು: ಪಿ ಎಸ್ ಐ ಹುದ್ದೆ ನೇಮಕಾತಿ ಅಕ್ರಮದಲ್ಲಿ ಸರ್ಕಾರವೇ ನೇರವಾಗಿ ಭಾಗಿಯಾಗಿದೆ. ಭ್ರಷ್ಟಾಚಾರ ನಡೆಸಿರುವ ಇಬ್ಬರು ಅಧಿಕಾರಿಗಳನ್ನು ನಿನ್ನೆ ಒಂದೇ ದಿನ ಬಂಧಿಸಲಾಗಿದೆ. ಅಕ್ರಮ ನಡೆಸುತ್ತಿರುವವರಿಗೆ ಸ್ವತಃ ಸಿಎಂ ಅವರೇ ರಕ್ಷಣೆ ನೀಡಿದ್ದಾರೆ. ಹೀಗಾಗಿ ಮೊದಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರಾಜೀನಾಮೆ ನೀಡಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಗೃಹ ಸಚಿವ ಅರಗ ಜ್ಞಾನೇಂದ್ರ ರಾಜೀನಾಮೆಗೆ ಆಗ್ರಹಿಸಿದರು.

ಪಿ ಎಸ್ ಐ ನೇಮಕಾತಿ ಹಗರಣದಲ್ಲಿ ಎಡಿಜಿಪಿ ಅಮೃತ್ ಪೌಲ್ ಅವರನ್ನು ಬಂಧಿಸಲಾಗಿದೆ. ಅಕ್ರಮದಲ್ಲಿ ಸಚಿವ ಅಶ್ವತ್ಥನಾರಾಯಣ ಹೆಸರು ಕೇಳಿ ಬಂದಿದೆ. ಆದರೂ ಅವರನ್ನು ವಿಚಾರಣೆ ನಡೆಸಿಲ್ಲ. ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರವೇ ಅಕ್ರಮದಲ್ಲಿ ಭಾಗಿಯಾಗಿದೆ. ಮೇಲಿನವರಿಂದ ಸೂಚನೆ ಬರದಿದ್ದರೆ ಅಧಿಕಾರಿಗಳು ಪಿ ಎಸ್ ಐ ನೇಮಕಾತಿ ಅಕ್ರಮಕ್ಕೆ ಅವಕಾಶ ನೀಡುತ್ತಿದ್ದರೇ? ಲಂಚಕ್ಕೆ ಬೇಡಿಕೆ ಒಡ್ದುತ್ತಿದ್ದರೇ? ನ್ಯಾಯಮೂರ್ತಿಗಳಿಗೂ ಬೆದರಿಕೆ ಹಾಕುವ ಹಂತಕ್ಕೆ ಹೋಗಿದ್ದಾರೆ ಆದರೆ ನ್ಯಾಯಮೂರ್ತಿಗಳು ಹೆದರಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಪಿ ಎಸ್ ಐ ಅಕ್ರಮದ ಬಗ್ಗೆ ವಿಧಾನಸಭೆಯಲ್ಲಿ ನಾನು ಪ್ರಸ್ತಾಪಿಸಿದಾಗ ಗೃಹ ಸಚಿವರು ಯಾವ ಅಕ್ರಮವೂ ನಡೆದಿಲ್ಲ. ಕಾಂಗ್ರೆಸ್ ನಾಯಕರು ಅನಗತ್ಯ ಆರೋಪ ಮಾಡುತ್ತಿದ್ದಾರೆ ಎಂದು ನಮ್ಮ ಮೇಲೆಯೇ ಮುಗಿಬಿದ್ದರು. ಈಗ ಅಧಿಕಾರಿಗಳನ್ನು ಬಂಧಿಸುವ ಹಂತಕ್ಕೆ ಅಕ್ರಮ ಸಾಬೀತಾಗಿದೆ. 545 ಪಿ ಎಸ್ ಐ ಹುದ್ದೆ ನೇಮಕಾತಿಯಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದಿದೆ. ಯಾರ ಯಾರ ಜೇಬಿಗೆ ಎಷ್ಟೆಷ್ಟು ಹೋಗಿದೆ? ಸಿಎಂ ಅವರಿಗೂ ಹೋಗಿದೆಯಾ ಎಂಬುದು ತನಿಖೆಯಿಂದ ಗೊತ್ತಾಗಬೇಕು. ಹಾಗಾಗಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲಿ. ರಾಜ್ಯಪಾಲರು ಸರ್ಕಾರವನ್ನು ವಜಾಗೊಳಿಸಲಿ ಎಂದು ಒತ್ತಾಯಿಸಿದರು.

ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯ ಬಿಜೆಪಿ ಸರ್ಕಾರ ಕರ್ನಾಟಕದ ಆಡಳಿತಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದೆ. ಕೋರ್ಟ್ ಆದೇಶದ ಬಳಿಕ ಇಬ್ಬರು ಅಧಿಕಾರಿಗಳನ್ನು ಬಂಧಿಸಲಾಗಿದೆ. ಸರ್ಕಾರವೇ ಪ್ರಕರಣದಲ್ಲಿ ಶಾಮೀಲಾಗಿದೆ ಎಂಬುದು ಖಚಿತ. ಸ್ವಲ್ಪನಾದರೂ ಮಾನ, ಮರ್ಯಾದೆ ಎಂಬುದು ಇದೆಯೇ? ಪ್ರಕರಣದ ಹೊಣೆ ಹೊತ್ತು ಮೊದಲು ಸಿಎಂ ಹಾಗೂ ಗೃಹ ಸಚಿವರು ರಾಜೀನಾಮೆ ಕೊಡಲಿ ಎಂದರು.

545 ಪಿ ಎಸ್ ಐ ಹುದ್ದೆ ಹಗರಣದಲ್ಲಿ ಎಡಿಜಿಪಿಯನ್ನು ಬಂಧಿಸಿದ ಅಧಿಕಾರಿಗಳು ಕೇವಲ ಅರ್ಧಗಂಟೆ ವಿಚಾರಣೆ ಮಾಡಿ ಕೋರ್ಟ್ ಮುಂದೆ ಹಾಜರು ಪಡಿಸಿದರು. ಇದು ಸಾರ್ವಜನಿಕರನ್ನು, ನ್ಯಾಯಾಲಯವನ್ನು ಕಣ್ಣೊರೆಸುವ ತಂತ್ರ ಎಂಬುದು ಎಲ್ಲರಿಗೂ ಗೊತ್ತಾಗುತ್ತಿದೆ. ಅದೇ ಒಂದು ಸಣ್ಣ ಕೇಸ್ ಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿಯವರನ್ನು 50 ಗಂಟೆಗಳ ಕಾಲ ಇಡಿ ಅಧಿಕಾರಿಗಳು ವಿಚಾರಣೆ ನಡೆಸುವಂತೆ ಮಾಡಿದರು. ಇದು ಯಾರಿಗೂ ಗೊತ್ತಾಗಲ್ಲ ಎಂದುಕೊಂಡಿದ್ದಾರೆಯೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...