ಬೆಂಗಳೂರು: ಎಂಇಎಸ್ ಪುಂಡಾಟದ ವಿರುದ್ಧ ಕನ್ನಡ ಪರ ಸಂಘಟನೆಗಳು ಡಿಸೆಂಬರ್ 31ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ಬಂದ್ ದಿನಾಂಕ ಬದಲಾವಣೆ ಇಲ್ಲ, 31ರಂದು ಬಂದ್ ಮಾಡೇ ಮಾಡ್ತೀವಿ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಕರ್ನಾಟಕ ಬಂದ್ ಗೆ ಕೆಲ ಸಂಘಟನೆಗಳು ಬೆಂಬಲ ಸೂಚಿಸಿವೆ, ಇನ್ನು ಕೆಲ ಸಂಘಟನೆಗಳು ನೈತಿಕ ಬೆಂಬಲ ಮಾತ್ರ ಸೂಚಿಸಿದ್ದಾರೆ. ಆದರೆ ನಮಗೆ ಯಾವುದೇ ನೈತಿಕ ಬೆಂಬಲ ನೀಡುವ ಅಗತ್ಯವಿಲ್ಲ. ಇದು ಕನ್ನಡಿಗರ ಅಳಿವು, ಉಳಿವಿನ ಪ್ರಶ್ನೆ. ಎಲ್ಲಾ ಸಂಘಟನೆಗಳು ಸಂಪೂರ್ಣ ಬೆಂಬಲ ನೀಡಬೇಕು ಎಂದು ಆಗ್ರಹಿಸಿದರು.
ಸೈಕಲ್ ಏರಿ ಬಂದ ಸಾಂಟಾ..! ಅನಾಥ ಮಕ್ಕಳಿಗೆ ಕ್ರಿಸ್ಮಸ್ ಗಿಫ್ಟ್
ಪ್ರಮುಖವಾಗಿ ಕನ್ನಡ ಚಿತ್ರರಂಗ ಬಂದ್ ಗೆ ಬೆಂಬಲ ನೀಡಲಿ. ಬಂದ್ ಬೇಡ ಎಂದು ಹೇಳುವ ನಟರು, ಸಿನಿಮಾದವರು ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾಗಿ ಎಂಇಎಸ್ ನಿಷೇಧ ಮಾಡುವಂತೆ ಮನವಿ ಮಾಡಲಿ. ಎಂಇಎಸ್ ಬ್ಯಾನ್ ಮಾಡುವುದಾಗಿ ಸರ್ಕಾರ ಹೇಳಿದರೆ ಬಂದ್ ವಾಪಸ್ ಪಡೆಯುತ್ತೇವೆ ಎಂದರು.
ನಾವು ಕನ್ನಡ ಚಿತ್ರರಂಗದ ವಿರುದ್ಧ ಬಂದ್ ಕರೆ ನೀಡಿಲ್ಲ, ಕನ್ನಡ ಬಾವುಟ ಸುಟ್ಟವರ ವಿರುದ್ಧ, ಎಂಇಎಸ್ ಪುಂಡಾಟಿಕೆ ವಿರುದ್ಧ ಹೋರಾಡುತ್ತಿದ್ದೇವೆ. ಕನ್ನಡಕ್ಕೆ ಆದ ಅವಮಾನ, ಕನ್ನಡ ಚಿತ್ರರಂಗಕ್ಕೂ ಆದ ಅವಮಾನ. ಡಿಸೆಂಬರ್ 31ರಂದು ಕರೆ ನೀಡಿರುವ ಬಂದ್ ಗೆ ಎಲ್ಲರೂ ಬೆಂಬಲ ನೀಡಲಿ ಎಂದು ಆಗ್ರಹಿಸಿದರು.
ಎಂಇಎಸ್ ನಿಷೇಧ ಮಾಡುವ ಬಗ್ಗೆ ರಾಜ್ಯ ಸರ್ಕಾರ ನಿರ್ಧಾರ ಪ್ರಕಟಿಸಲಿ. ಡಿಸೆಂಬರ್ 29ರ ರಾತ್ರಿವರೆಗೂ ಸರ್ಕಾರಕ್ಕೆ ಡೆಡ್ ಲೈನ್ ನೀಡುತ್ತೇವೆ. ಒಂದೊಮ್ಮೆ ಸರ್ಕಾರ ಸ್ಪಷ್ಟ ನಿಲುವು ಪ್ರಕಟಿಸದಿದ್ದರೆ 31ರಂದು ಕರ್ನಾಟಕ ಸಂಪೂರ್ಣ ಬಂದ್ ಆಗಲಿದೆ ಎಂದು ಎಚ್ಚರಿಸಿದರು.