ಬೆಂಗಳೂರು: ಮೀಸಲಾತಿ ವಿಚಾರ ಬಹಳ ಸೂಕ್ಷ್ಮ ವಿಚಾರ. ಎಸ್ಸಿ, ಎಸ್ ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ರಾಜಕೀಯವಾಗಿ ಸಾಂದರ್ಭಿಕವಾಗಿ ಮಾತನಾಡುವುದು ತಪ್ಪಾಗುತ್ತದೆ. ಒಕ್ಕಲಿಗ ಸಮುದಾಯಕ್ಕೂ ಮೀಸಲಾತಿ ಹೆಚ್ಚಳ ಮಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿ.ಟಿ. ರವಿ, ಒಕ್ಕಲಿಗ ಸಮುದಾಯಕ್ಕೂ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಬೇಕು ಎಂಬ ಕೂಗು ಕೇಳಿಬರುತ್ತಿದೆ. ನಮ್ಮ ಸಮುದಾಯಕ್ಕೆ ನ್ಯಾಯ ಕೊಡಿಸುವುದು ನಮ್ಮ ಜವಾಬ್ದಾರಿ ಎಂದರು.
ಮೀಸಲಾತಿಯನ್ನು ನ್ಯಾಯಯುತವಾಗಿ ಪರಿಶೀಲನೆ ಮಾಡಬೇಕು. ಕಾಲಕಾಲಕ್ಕೆ ಮಾರ್ಪಾಡುಗಳಾಗಬೇಕು. ನ್ಯಾಯ ಸಿಗದ ವರ್ಗಕ್ಕೆ ಮೀಸಲಾತಿ ಸಿಗುವಂತಾಗಬೇಕು ಎಂದು ಹೇಳಿದರು.
ಒಕ್ಕಲಿಗ ಸಮುದಾಯಕ್ಕೂ ಮೀಸಲಾತಿ ಕೊಡಬೇಕು. ನಮ್ಮ ಸಮುದಾಯದ ಸ್ವಾಮೀಜಿ ನಿರ್ಮಲಾನಂದ ಶ್ರೀ ಒಕ್ಕಲಿಗ ಸಮುದಾಯ ಮೀಸಲಾತಿ ಹೆಚ್ಚಳಕ್ಕಾಗಿ ಹೋರಾಟ ನಡೆಸಿದರೆ ನಾನು ಬೆಂಬಲಿಸಲೇಬೇಕು. ಸಮಯ ಬಂದರೆ ನ್ಯಾಯದ ತಕ್ಕಡಿ ಹಿಡಿದೇ ಹೋಗುತ್ತೇನೆ. ಯಾವ ಸಮುದಾಯಕ್ಕೂ ಅನ್ಯಾಯವಾಗಬಾರದು. ನ್ಯಾಯ ಕೊಡಿಸೋದು ನಮ್ಮ ಹೊಣೆ ಎಂದು ಹೇಳಿದರು.