ಮುಂಬರುವ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಜೆಡಿಎಸ್, ಈಗಾಗಲೇ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದು, ಎರಡನೇ ಪಟ್ಟಿ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಆದರೆ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರ ಪಕ್ಷದ ನಾಯಕರ ಪಾಲಿಗೆ ಕಗ್ಗಂಟಾಗಿ ಪರಿಣಮಿಸಿದೆ ಎಂದು ಹೇಳಲಾಗಿದೆ.
ಹಾಸನದಿಂದ ಕಣಕ್ಕಿಳಿಯಲು ಮಾಜಿ ಸಚಿವ ಎಚ್.ಡಿ. ರೇವಣ್ಣನವರ ಪತ್ನಿ ಭವಾನಿ ರೇವಣ್ಣ ಆಕಾಂಕ್ಷಿಯಾಗಿದ್ದು, ಮಾಜಿ ಶಾಸಕ ಪ್ರಕಾಶ್ ಅವರ ಪುತ್ರ ಸ್ವರೂಪ್ ಕೂಡ ಜೆಡಿಎಸ್ ಟಿಕೆಟ್ ಬಯಸಿದ್ದಾರೆ. ಈ ಹಿಂದೆ ನಡೆದ ಸಭೆಯೊಂದರಲ್ಲಿ ಸ್ವರೂಪ್ ಅಭ್ಯರ್ಥಿ ಎಂದು ಪರೋಕ್ಷವಾಗಿ ಘೋಷಿಸಿದ್ದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ, ಅಖಾಡಕ್ಕೆ ಭವಾನಿ ರೇವಣ್ಣ ಎಂಟ್ರಿ ಆಗುತ್ತಿದ್ದಂತೆ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಇದರ ಮಧ್ಯೆಯೂ ಸ್ವರೂಪ್ ಅವರಿಗೆ ಟಿಕೆಟ್ ನೀಡಲು ಕುಮಾರಸ್ವಾಮಿಯವರು ಒಲವು ತೋರುತ್ತಿದ್ದು, ಹಾಸನ ಕ್ಷೇತ್ರದ ಮುಖಂಡರ ಸಭೆಯನ್ನು ಇಂದು ಬೆಂಗಳೂರಿನಲ್ಲಿ ಏರ್ಪಡಿಸಲಾಗಿತ್ತು. ಆದರೆ ಜೆಡಿಎಸ್ ವರಿಷ್ಠ ದೇವೇಗೌಡರ ಸೂಚನೆಯಂತೆ ಈ ಸಭೆಯನ್ನು ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಬೆಳವಣಿಗೆಗಳ ನಡುವೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಮಾತನಾಡಿರುವ ಎಚ್.ಡಿ. ಕುಮಾರಸ್ವಾಮಿ, ಹಾಸನದಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡುವ ನನ್ನ ಮೊದಲಿನ ನಿಲುವಿಗೆ ಈಗಲೂ ಬದ್ಧ ಎಂದಿದ್ದಾರೆ.
ಕಳೆದ 18ರಿಂದ 20 ವರ್ಷದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ನಮಗೆ ಇಷ್ಟವಿಲ್ಲದಿದ್ದರೂ ಕೆಲವೊಂದು ತಪ್ಪಾಗಿದೆ. ಇದು ಪುನರಾವರ್ತನೆಯಾಗಲು ನಾನು ಬಿಡುವುದಿಲ್ಲ ಎನ್ನುವ ಮೂಲಕ ಸ್ವರೂಪ್ ಅವರಿಗೆ ಹಾಸನ ಟಿಕೆಟ್ ನೀಡುವ ಸುಳಿವನ್ನು ನೀಡಿದ್ದಾರೆ.