ಬೆಂಗಳೂರು: ಪೇಸಿಎಂ ಪೋಸ್ಟರ್ ಅಭಿಯಾನದ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕರ್ತರ ಬಂಧನ ಖಂಡಿಸಿ ವಿಧಾನಸಭೆ ಹಾಗೂ ವಿಧಾನಪರಿಷತ್ ನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ಜಟಾಪಟಿ ಜೋರಾಗಿತ್ತು.
ಪರಿಷತ್ ನಲ್ಲಿ ಪೋಸ್ಟರ್ ಹಿಡಿದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಸದಸ್ಯರು ಧರಣಿ ನಡೆಸುತ್ತಿದ್ದಂತೆ ಬಿಜೆಪಿ ಸದಸ್ಯರು ಕೂಡ ಪ್ರತಿಯಾಗಿ ಪ್ರತಿಭಟನೆ ನಡೆಸಿದರು. ಸರ್ಕಾರದ 40% ಕಮಿಷನ್ ಬಗ್ಗೆ ಪ್ರಸ್ತಾಪಿಸಿ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಸದನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಗದ್ದಲ ಗಲಾಟೆ ನಡುವೆಯೂ ಪರಿಷತ್ ಸಭಾಪತಿ ಮಲ್ಕಾಪೂರೆ ಪ್ರಶ್ನೋತ್ತರ ಕಲಾಪಕ್ಕೆ ಅವಕಾಶ ನೀಡುತ್ತಿದ್ದಂತೆ ಸಭಾಪತಿ ವಿರುದ್ಧ ಬಿ.ಕೆ.ಹರಿಪ್ರಸಾದ್ ಘೋಷಣೆ ಕೂಗಿದರು.
ಕಾಂಗ್ರೆಸ್ ಸದಸ್ಯರು ಪೇಸಿಎಂ ಪೋಸ್ಟರ್ ಗಳನ್ನು ಹಿಡಿದು ಸಭಾಪತಿ ಪೀಠಕ್ಕೆ ಮುತ್ತಿಗೆ ಹಾಕಿ ಆಕ್ರೋಶ ನಡೆಸಿದರು. ಇನ್ನೊದೆಡೆ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಸದನದಲ್ಲಿ ಕುರ್ಚಿ ಮೇಲೆ ಹತ್ತಿ ನಿಂತು ಸಭಾಪತಿ ಹಾಗೂ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಪರಿಷತ್ ನಲ್ಲಿ ಕೋಲಾಹಲ ಹೆಚ್ಚುತ್ತಿದ್ದಂತೆ ಸಭಾಧ್ಯಕ್ಷರು ಕಲಾಪವನ್ನೇ ಮುಂದೂಡಿದರು.