ಬೆಂಗಳೂರು: ವಿಧಾನಸಭೆಯಲ್ಲಿ ಬೆಂಗಳೂರಿನ ಪ್ರವಾಹ ಪರಿಸ್ಥಿತಿ ಚರ್ಚೆ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಂದಾಯ ಸಚಿವ ಆರ್.ಅಶೋಕ್ ಅವರ ಕಾಲೆಳೆದ ಪ್ರಸಂಗ ನಡೆದಿದೆ.
ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ವೇಳೆ ಬೆಂಗಳೂರಿನಲ್ಲಿ ಪ್ರವಾಹ ಪರಿಸ್ಥಿತಿ, ಒತ್ತುವರಿ ತೆರವು ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡುತ್ತಾ ಕಂದಾಯ ಸಚಿವರ ಕಾಲೆಳೆದಿದ್ದಾರೆ. ಸಚಿವ ಅಶೋಕ್ ಕಬಡ್ಡಿ ಆಡ್ತಾನೆ…. ಅಶೋಕ್ ನೀನು ಕಬಡ್ಡಿ ಆಡುತ್ತಿದ್ದೆ ಅಲ್ವಾ? ಎಂದು ಸಚಿವರತ್ತ ತಿರುಗಿ ಪ್ರಶ್ನಿಸಿದ್ದಾರೆ. ಇದಕ್ಕೆ ಸಚಿವರು ಹೌದು 20 ವರ್ಷ ಕಬಡ್ಡಿ ಆಡಿದ್ದೇನೆ ಎಂದು ಹೇಳಿದ್ದಾರೆ.
ಸಚಿವ ಅಶೋಕ್ ಕಬಡ್ಡಿ ಆಡಿದ್ದಾನೆ, ಸ್ಟ್ರಾಂಗ್ ಇದ್ದಾನೆ. ಅಶೋಕ್ ಎನರ್ಜಿ ಖಾಲಿಯಾಗಿಲ್ಲ ಎಂದು ಹೇಳುತ್ತಿದ್ದಂತೆ ಎದ್ದುನಿಂತ ಸಚಿವ ಆರ್.ಅಶೋಕ್, 20 ವರ್ಷ ಕಬಡ್ಡಿ ಆಡಿದ್ದೇನೆ. ಕ್ಯಾಚ್ ಹಾಕೋದು ಹೇಗೆ ಅಂತಾನೂ ಗೊತ್ತು. ಎಂದಿದ್ದಾರೆ. ಇದಕ್ಕೆ ಉತ್ತರವಾಗಿ ಸಿದ್ದರಾಮಯ್ಯನವರು ಕುಳಿತುಕೊಳ್ಳಪ್ಪ ಪ್ರಶ್ನೆ ಕೇಳಿದರೆ ಒಮ್ಮೆಲೆ ಎದ್ದು ನಿಂತು ಬಿಡ್ತೀಯಲ್ಲಾ ಎನ್ನುತ್ತಾ… ನಾನು ಹೈಸ್ಕೂಲ್ ನಲ್ಲಿ ಇದ್ದಾಗ ಕಬಡ್ಡಿ ಆಡ್ತಿದ್ದೆ ಪಿಯುಸಿಗೆ ಹೋದ್ಮೇಲೆ ಕಬಡ್ಡಿನೂ ಇಲ್ಲ ಏನೂ ಇಲ್ಲ ಎಂದು ಹೇಳುತ್ತಿದ್ದಂತೆ ಸದನದ ಸದಸ್ಯರು ಕೆಲ ಕಾಲ ನಗೆಗಡಲಲ್ಲಿ ತೇಲಿದರು.