ಬೆಂಗಳೂರು: ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ್ದು, ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತಿನ ಸಮರಕ್ಕೆ ಕಾರಣವಾಯಿತು.
ಭ್ರಷ್ಟಾಚಾರ ಬಯಲಿಗೆ ಬರುತ್ತೆ ಎಂಬ ಕಾರಣಕ್ಕೆ ಪಿಎಸ್ಐ ನೇಮಕಾತಿ ಹಗರಣದ ಬಗ್ಗೆ ವಿಷಯ ಚರ್ಚೆಗೆ ಅವಕಾಶ ಕೊಡುತ್ತಿಲ್ಲ ಎಂದು ಸರ್ಕಾರದ ವಿರುದ್ಧ ವಿಪಕ್ಷನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಸ್ಪೀಕರ್ ಕಾಗೇರಿ ಚರ್ಚೆಗೆ ಅವಕಾಶ ಮಾಡಿಕೊಟ್ಟರು.
ಈ ವೇಳೆ ಲಂಚಕೊಟ್ಟು ಉದ್ಯೋಗ ಪಡೆಯಲು ನಮ್ಮಿಂದ ಸಾಧ್ಯವಿಲ್ಲ ಎಂದು ನಮ್ಮ ತಂದೆ – ತಾಯಿಗಳು ಅವರು ಬೆಳೆದಿರುವ ಅಕ್ಕಿ, ಉದ್ದು, ಹೆಸರು, ಕಡಲೆ, ಗೋದಿ, ರಾಗಿಯನ್ನು ಕಳುಹಿಸಿಕೊಟ್ಟಿದ್ದಾರೆ. ಎಲ್ಲವನ್ನೂ ಪ್ಯಾಕ್ ಮಾಡಿ ಸರ್ಕಾರಕ್ಕೆ ಹೋಗಿ ಕೊಡಿ ಎಂದು ಹೇಳಿದ್ದಾರೆ. ಹಾಗಾಗಿ ನಾನು ಬೆಳಿಗ್ಗೆಯೇ ಅಕ್ಕಿ, ಗೋದಿ, ರಾಗಿ, ಬೇಳೆ ಎಲ್ಲವನ್ನು ತಂದು ಇಲ್ಲಿಟ್ಟಿದ್ದೆ. ಈಗ ನೋಡಿದರೆ ಅದನ್ನೂ ಯಾರೋ ಎತ್ಕೊಂಡು ಹೋಗಿದ್ದಾರೆ. ರಾಜ್ಯದಲ್ಲಿರುವುದು ಕಡು ಭ್ರಷ್ಟ ಸರ್ಕಾರ. ಪಿಎಸ್ಐ ಹುದ್ದೆಗಾಗಿ ಕೋಟಿ ಕೋಟಿ ಹಣ ಲೂಟಿ ಮಾಡಿದೆ ಎಂದು ಸಿದ್ದರಾಮಾಯ್ಯ ಕೆಂಡ ಕಾರಿದರು.
ವಿಪಕ್ಷ ನಾಯಕರ ಆರೋಪಕ್ಕೆ ಕೆಂಡಾಮಂಡಲರಾದ ಸಿಎಂ ಬೊಮ್ಮಾಯಿ ನಿಮ್ಮ ಸರ್ಕಾರದ ಅವಧಿಯಲ್ಲಿಯೂ ಸಾಲು ಸಾಲು ಹಗರಣಗಳು ನಡೆದಿದ್ದವು. ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ವಿಷಯ ಗೊತಾಗುತ್ತಿದ್ದಂತೆ ಸಿಐಡಿ ತನಿಖೆಗೆ ಆದೇಶಿಸಿದ್ದೇವೆ. ತನಿಖೆ ನಡೆಯುತ್ತಿದೆ. ನಿಮ್ಮ ಸರ್ಕಾರದ ಅವಧಿಯಲ್ಲಿನ ಅಕ್ರಮದ ಬಗ್ಗೆ ತನಿಖೆಯನ್ನೂ ನಡೆಸದೇ ಹಗರಣಗಳನ್ನೇ ಮುಚ್ಚಿ ಹಾಕಿಸಿದ್ದೀರಿ ಎಂದು ಗುಡುಗಿದರು.
ಸಿಎಂ ಆರೋಪಕ್ಕೆ ಆಕ್ರೋಶಗೊಂಡ ಸಿದ್ದರಾಮಯ್ಯ, ನಮ್ಮ ಕಾಲದಲ್ಲಿ ಅಕ್ರಮ ನಡೆದಿದ್ದರೆ ಆಗ ವಿಪಕ್ಷದಲ್ಲಿದ್ದ ನೀವು ಏನು ಮಾಡುತ್ತಿದ್ದಿರಿ ? ಅಕ್ರಮ ನಡೆದಿದ್ದರೆ ನೀವು ಸುಮ್ಮನಿರುತ್ತಿದ್ದಿರೇ ? ಈಗ ನಿಮ್ಮ ಅವಧಿಯಲ್ಲಿಯೂ ಅಕ್ರಮ ನಡೆದಿತ್ತು ಎಂದು ಆರೋಪಿಸುತ್ತಾ ಹಗರಣದ ಬಗ್ಗೆ ಸಮರ್ಥನೆ ಮಾಡಿಕೊಳ್ಳುತ್ತಿದ್ದಿರಾ ? ಎಲ್ಲಾ ಅಕ್ರಮಗಳ ಬಗ್ಗೆಯೂ ನ್ಯಾಯಾಂಗ ತನಿಖೆಯಾಗಲಿ ಎಂದು ಒತ್ತಾಯಿಸಿದರು.
ಸಿಎಂ ಬೊಮ್ಮಾಯಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತಿನ ಜಟಾಪಟಿ ನಡುವೆ ಸಚಿವರು, ಶಾಸಕರು ಸೈಲೆಂಟ್ ಆಗಿಯೇ ಕುಳಿತು ವೀಕ್ಷಿಸಿದ್ದು ಅಚ್ಚರಿಗೆ ಕಾರಣವಾಯಿತು.