ಬೆಂಗಳೂರು: ವಿಧಾನಸಭೆಯಲ್ಲಿ ಇಂದು ಮಡಿಕೇರಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಪ್ರಕರಣ ಪ್ರತಿಧ್ವನಿಸಿದ್ದು, ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ವಿಪಕ್ಷ ನಾಯಕನ ಕಾರಿನ ಮೇಲೆ ಮೊಟ್ಟೆ ಎಸೆಯುವಂತೆ ಮಾಡಿಸಿದ ಬಿಜೆಪಿ ನಾಯಕರೇ ನೀವೇನು ವೀರರಾ? ಶೂರರಾ? ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸಭೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಮಳೆಹಾನಿ ಪ್ರದೇಶಕ್ಕೆ ಭೇಟಿ ಕೊಡಲು ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ಬಿಜೆಪಿ ಕಾರ್ಯಕರ್ತರು ನನ್ನ ಕಾರಿನ ಮೇಲೆ ಎರಡು ಕಡೆಗಳಲ್ಲಿ ಮೊಟ್ಟೆ ಎಸೆದಿದ್ದಾರೆ. ಮೊಟ್ಟೆ ದಾಳಿಯಾಗುತ್ತಿದ್ದಂತೆ ಹಿಂದಿನಿಂದ ಕಲ್ಲು ತೂರಾಟ ಕೂಡ ಮಾಡಿದ್ದಾರೆ. ಮೊಟ್ಟೆ ಎಸೆದ್ರೆ ನೀವೇನು ವೀರರಾ? ನಾನು ಮನಸ್ಸು ಮಾಡಿದ್ರೆ ಇಡೀ ರಾಜ್ಯಾದ್ಯಂತ ನಿಮ್ಮ ವಿರುದ್ಧ ಮೊಟ್ಟೆ ಹೊಡೆಸಬಲ್ಲೆ. ರಾಜ್ಯಾದ್ಯಂತ ಮೊಟ್ಟೆ ಎಸೆಯುವಂತೆ ಮಾಡಿಸಲು ನನಗೆ ಆಗಲ್ವಾ? ಎಂದು ರೋಷಾವೇಶ ವ್ಯಕ್ತಪಡಿಸಿದರು.
ಕಾರ್ಯಕರ್ತರು ವಿಪಕ್ಷ ನಾಯಕನ ಮೇಲೆ ಮೊಟ್ಟೆ ಎಸೆಯುವಂತೆ ಹೇಳಿ ಪ್ರಚೋದನೆ ಕೊಟ್ಟು ಮಾಡಿಸಿದ್ದು ಬಿಜೆಪಿ ನಾಯಕರೇ. ಮೊಟ್ಟೆ ಎಸೆದ ಆರೋಪಿಗಳನ್ನು ಬಂಧಿಸುವುದನ್ನು ಬಿಟ್ಟು ಕುಮ್ಮಕ್ಕು ನೀಡುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಂದು ರೆಡ್ದಿ ಬ್ರದರ್ಸ್ ಬಳ್ಳಾರಿಗೆ ಬನ್ನಿ ಎಂದು ಸವಾಲು ಹಾಕಿದ್ದರು. ಬಳ್ಳಾರಿಗೆ ಪಾದಯಾತ್ರೆ ಕೈಗೊಂಡಿದ್ವಿ. ಅದೇ ರೀತಿ ಬೊಪಯ್ಯ ಕೊಡಗಿಗೆ ಬನ್ನಿ ನೋಡೋಣ ಎಂದು ಹೇಳಿದ್ರು ಎಂದು ಸಿದ್ದರಾಮಯ್ಯ ಹೇಳುತ್ತಿದ್ದಂತೆ ಎದ್ದುನಿಂತ ಶಾಸಕ ಬೋಪಯ್ಯ, ಬನ್ನಿ ನಮ್ಮ ಮನೆ ನಾಯಿ ಸ್ವಾಗತ ಮಾಡುತ್ತೆ ಎಂದಿದ್ದೆ ಎಂದು ಪ್ರತಿಕ್ರಿಯಿಸಿದರು.
ಇದರಿಂದ ಕಾಂಗ್ರೆಸ್ ಸದಸ್ಯರು ಬಿಜೆಪಿ ನಾಯಕರ ವಿರುದ್ಧ ಸದನದಲ್ಲಿ ತಿರುಗಿ ಬಿದ್ದಿದ್ದು, ನೇರಾ ನೇರವಾಗಿ ಎದುರಿಸುವುದನ್ನು ಬಿಟ್ಟು ಕಾರ್ಯಕರ್ತರನ್ನು ಮುಂದಿಟ್ಟು ಪ್ರತಿಭಟನೆ ನಡೆಸಿದ್ದಲ್ಲದೇ ಬಳಿಕ ಮೊಟ್ಟೆ ದಾಳಿ ಮಾಡಿದ್ದಾರೆ. ಕಾಂಗ್ರೆಸ್ ಕೊಡಗಿನಲ್ಲಿ ಪ್ರತಿಭಟನೆ ನಡೆಸಲು ಕರೆ ಕೊಡುತ್ತಿದ್ದಂತೆ 144 ಸೆಕ್ಷನ್ ಜಾರಿ ಮಾಡಿ ತಪ್ಪಿಸಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಮಡಿಕೇರಿ ಮೊಟ್ಟೆ ಕದನ ಸದನದಲ್ಲಿಯೂ ಕದನಕ್ಕೆ ಕಾರಣವಾಗಿದ್ದು, ಸರ್ಕಾರ ಹಾಗೂ ವಿಪಕ್ಷದ ಸದಸ್ಯರ ನಡುವೆ ವಾಕ್ಸಮರಕ್ಕೆ ಸಾಕ್ಷಿಯಾಯಿತು.