ಬೆಂಗಳೂರು: ಅರಣ್ಯ ಇಲಾಖೆ ಅಧಿಕಾರಿಗಳ ಕಿರುಕುಳದಿಂದ ರೈತ ಮಹಿಳೆ ನಿರ್ಮಲಾ ಆತ್ಮಹತ್ಯೆಗೆ ಶರಣಾದ ಪ್ರಕರಣ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ್ದು, ಕಾಂಗ್ರೆಸ್ ಶಾಸಕರ ವಿಷಯ ಪ್ರಸ್ತಾಪಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬೆಂಬಲ ವ್ಯಕ್ತಪಡಿಸಿ, ಧ್ವನಿಗೂಡಿಸಿದ ಪ್ರಸಂಗ ನಡೆದಿದೆ.
ಗದಗ ಜಿಲ್ಲೆ ಮುಂಡರಗಿಯಲ್ಲಿ ಬಗರ್ ಹುಕುಂ ಸಾಗುವಳಿ ರೈತರನ್ನು ಒಕ್ಕಲೆಬ್ಬಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ರೈತ ಮಹಿಳೆಯರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಚಿಕಿತ್ಸೆ ಫಲಿಸದೇ ಓರ್ವ ಮಹಿಳೆ ಸಾವನ್ನಪ್ಪಿದ್ದರೆ ಇನ್ನೋರ್ವ ಮಹಿಳೆ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ. ಈ ವಿಚಾರ ಇಂದು ಸದನದಲ್ಲಿ ಪ್ರತಿಧ್ವನಿಸಿದ್ದು, ಕಾಂಗ್ರೆಸ್ ಶಾಸಕ ಹೆಚ್.ಕೆ.ಪಾಟೀಲ್, ಬಗರ್ ಹುಕುಂ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಆಗ್ರಹಿಸಿದರು.
ಹೆಚ್.ಕೆ.ಪಾಟೀಲ್ ಪ್ರಸ್ತಾಪಕ್ಕೆ ಧ್ವನಿಗೂಡಿಸಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಇದೊಂದು ಗಂಭೀರ ಪ್ರಕರಣ. ಬಗರ್ ಹುಕುಂ ಸಮಸ್ಯೆಯನ್ನು ಸಿಎಂ ಬೊಮ್ಮಾಯಿ ಆದಷ್ಟು ಬೇಗ ಬಗೆಹರಿಸಬೇಕು. ಸಮಸ್ಯೆ ಮುಂದುವರೆದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ತರಲ್ಲ. ಹೋರಾಟಗಳು ಆರಂಭವಾದರೂ ಆಗಬಹುದು. ಹಾಗಾಗಿ ತಕ್ಷಣ ಈ ನಿಟ್ಟಿನಲ್ಲಿ ಸಿಎಂ ಕ್ರಮ ಕೈಗೊಳ್ಳಬೇಕು. ಅಗತ್ಯ ಬಿದ್ದರೆ ಸದನ ಸಮಿತಿ ರಚನೆ ಮಾಡಿ ಎಂದು ಸೂಚಿಸಿದರು.
ಈ ವೇಳೆ ಮಾತನಾಡಿದ ಸಚಿವ ಜೆ.ಸಿ.ಮಾಧುಸ್ವಾಮಿ, ಬಗರ್ ಹುಕುಂ ಸಾಗುವಳಿಯಿಂದ ರೈತರಿಗೆ ಸಮಸ್ಯೆಯಾಗುತ್ತಿರುವುದು ನಿಜ. ರಾಜ್ಯ ಸರ್ಕಾರ ಕಾಯ್ದೆಗೆ ತಿದ್ದುಪಡಿ ತರಲಿದೆ. ಅರಣ್ಯ ಇಲಾಖೆಯಿಂದ ಬೆಳೆ ಕಟಾವು ಮಾಡಿದ ರೈತರಿಗೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.