ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ವರ್ಗಾವಣೆ ದಂಧೆ ವಿಚಾರ ಪ್ರತಿಧ್ವನಿಸಿದ್ದು, ವಿಪಕ್ಷಗಳು ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ವಾಗ್ವಾದ, ಕೋಲಾಹಲ ನಡೆದಿದೆ.
ವಿಧಾನಸಭೆಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಜಗದೀಶ್ ಆತ್ಮಹತ್ಯೆ ಯತ್ನ ಪ್ರಕರಣ ಪ್ರಸ್ತಾಪಿಸಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ವರ್ಗಾವಣೆ ವಿಚಾರವಾಗಿಯೇ ಆತ್ಮಹತ್ಯೆಗೆ ಯತ್ನ ಎಂದು ಡೆತ್ ನೋಟ್ ಬರೆದಿಟ್ಟಿದ್ದಾಗಿ ಹೇಳಿದರು. ಅಲ್ಲದೇ ಇಂಧನ ಇಲಾಖೆಯಲ್ಲಿಯೂ ವರ್ಗಾವಣೆ ದಂಧೆ ನಡೆದಿದೆ ಎಂದು ಆರೋಪಿಸಿದರು.
ಇಂಧನ ಇಲಾಖೆಯಲ್ಲಿ ವರ್ಗಾವಣೆ ದಂಧೆ ಎಂದು ಹೇಳುತ್ತಿದ್ದಂತೆ ಇಂಧನ ಸಚಿವ ಕೆ.ಜೆ. ಜಾರ್ಜ್, ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು. ನನ್ನ ಬಳಿ ಪೆನ್ ಡ್ರೈವ್ ಇದೆ. ಇದರಲ್ಲಿ ಸಾಕ್ಷ್ಯವಿದೆ ಎಂದು ಹೆಚ್.ಡಿ.ಕೆ ಹೇಳುತ್ತಿದ್ದಾರೆ. ಸಾಕ್ಷಿ ಇದ್ದರೆ ಅದನ್ನು ಸ್ಪೀಕರ್ ಅವರಿಗೆ ನೀಡಿ ಎಂದು ಒತ್ತಾಯಿಸಿದರು. ಅನಗತ್ಯವಾಗಿ ತೇಜೋವಧೆ ಮಾಡುವ ಕೆಲಸ ಮಾಡಿದರೆ ನಮಗೂ ಹಾಗೇ ಮಾಡಲು ಬರುತ್ತದೆ ಎಂದು ಗುಡುಗಿದರು.
ಪೆನ್ ಡ್ರೈವ್ ನಲ್ಲಿರುವ ಸಾಕ್ಷ್ಯ ವೀಕ್ಷಣೆಗೆ ಸದನದಲ್ಲಿ ವ್ಯವಸ್ಥೆ ಮಾಡಿ. ಸ್ಪೀಕರ್ ಒಪ್ಪಿಗೆ ಕೊಟ್ಟರೆ ಸದನದಲ್ಲೇ ಪೆನ್ ಡ್ರೈವ್ ಪ್ರದರ್ಶನ ಮಾಡುತ್ತೇನೆ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಹೆಚ್.ಡಿ.ಕೆ ಮಾತಿಗೆ ಬಿಜೆಪಿ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು. ಈ ವೇಳೆ ಹೆಚ್.ಡಿ.ಕುಮಾರಸ್ವಾಮಿ ಡಿ ವೈ ಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣ ವಿಷಯವನ್ನೂ ಎಳೆದು ತಂದರು. ಈ ವೇಳೆ ಸಚಿವ ಕೆ.ಜೆ. ಜಾರ್ಜ್ ಹಾಗೂ ಕುಮಾರಸ್ವಾಮಿ ನಡುವೆ ವಾಗ್ವಾದ ಆರಂಭವಾಯಿತು. ಬೆಜೆಪಿ ಸದಸ್ಯರು ಕುಮಾರಸ್ವಾಮಿ ಬೆಂಬಲಕ್ಕೆ ನಿಂತು ಸರ್ಕಾರದ ವಿರುದ್ಧ ಮುಗಿ ಬಿದ್ದರು.
ಈ ವೇಳೆ ಬಿಜೆಪಿ, ಜೆಡಿಎಸ್ ಹಾಗೂ ಆಡಳಿತ ಪಕ್ಷ ಕಾಂಗ್ರೆಸ್ ಸದಸ್ಯರ ನಡುವೆ ಗದ್ದಲ-ಗಲಾಟೆ ಜೋರಾಗಿದ್ದು, ಸ್ಪೀಕರ್ ಖಾದರ್, ವಿಪಕ್ಷ-ಆಡಳಿತ ಪಕ್ಷದ ಸದಸ್ಯರಿಗೆ ಕುಳಿತುಕೊಳ್ಳುವಂತೆ ಸೂಚಿಸಿದರೂ ಕೇಳದೇ ಕೋಲಾಹಲವೆಬ್ಬಿಸಿದರು. ಒಟ್ಟಾರೆ ವಿಧಾನಸಭೆ ಕಲಾಪ ವಾಗ್ಯುದ್ಧಕ್ಕೆ ಸಾಕ್ಷಿಯಾಯಿತು.