
ಬೆಂಗಳೂರು: ವಿಪಕ್ಷ ನಾಯಕರ ಮಹಾ ಮೈತ್ರಿಕೂಟ ಸಭೆ ಹಿನ್ನೆಲೆಯಲ್ಲಿ ಸಿಎಂ ಸಚಿವರು ಇಂದಿನ ಅಧಿವೇಶನಕ್ಕೆ ಗೈರಾಗಿದ್ದು, ಬಿಜೆಪಿ ಸದಸ್ಯರು ಸದನವನ್ನೇ ಹೋಟೆಲ್ ಗೆ ಶಿಫ್ಟ್ ಮಾಡಿ ಎಂದಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಬಿಜೆಪಿ ಶಾಸಕ ಸುರೇಶ್ ಕುಮಾರ್, ಇಂದು ಸದನಕ್ಕೆ ಮುಖ್ಯಮಂತ್ರಿಗಳು, ಸಚಿವರೆಲ್ಲರೂ ಗೈರಾಗಿದ್ದಾರೆ. ಒಂದುದಿನದ ಮಟ್ಟಿಗೆ ಸದನವನ್ನು ತಾಜ್ ವೆಸ್ಟ್ ಎಂಡ್ ಹೋಟೆಲ್ ಗೆ ಶಿಫ್ಟ್ ಮಾಡಿ ಎಂದು ಮನವಿ ಮಾಡುತ್ತೇನೆ. ಮಹಾ ಮೈತ್ರಿಕೂಟ ಸಭೆಯಲ್ಲಿ ಮಂತ್ರಿಗಳು ಭಾಗಿಯಾಗಿರುವುದರಿಂದ ಅಲ್ಲಿಯೇ ಕಲಾಪ ನಡೆಸೋಣ ಎಂದು ಸ್ಪೀಕರ್ ಗೆ ಹೇಳಿದರು.
ಸದನವನ್ನು ಶಿಫ್ಟ್ ಮಾಡಲು ಸಾಧ್ಯವಿಲ್ಲ, ನಿಯಮ ಇದ್ದಿದ್ದರೆ ಹಾಗೇ ಮಾಡುತ್ತಿದ್ದೆ ಎಂದು ಸ್ಪೀಕರ್ ಯು.ಟಿ. ಖಾದರ್ ತಿಳಿಸಿದ್ದಾರೆ. ಈ ವೇಳೆ ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ, ಸಚಿವರೆಲ್ಲರೂ ತಾಜ್ ಹೋಟೆಲ್ ನ ಸಭೆಯಲ್ಲಿ ಭಾಗಿಯಾಗಿದ್ದಾರಾ ಅಥವಾ ಬೇರೆ ಕಡೆ ಹೋಗಿದ್ದಾರಾ ಎಂಬ ಬಗ್ಗೆ ಅನುಮಾನವಿದೆ ಎಂದು ಸರ್ಕಾರದ ಕಾಲೆಳೆದಿದ್ದಾರೆ.