ಬೆಂಗಳೂರು: ಹಿಂದೂ ಪದದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಗೆ ನಟ ಜಗ್ಗೇಶ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಹಿಂದೂಗಳು ಶಾಂತಿ ಪ್ರಿಯರು. ಕ್ಷಮಿಸುವ ಗುಣವುಳ್ಳವರು ಎಂದು ಪದೇ ಪದೇ ಕೆಣಕಲು ಹೋಗಬೇಡಿ. ಹಿಂದುಗಳು ಎದ್ದು ನಿಂತರೆ ನಿಮ್ಮ ಹೆಸರು ಹೇಳಲು ಇಲ್ಲದಂತೆ ಮಾಡ್ತಾರೆ ಎಂದು ಹಿರಿಯ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಗುಡುಗಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಗ್ಗೇಶ್, ಸತೀಶ್ ಜಾರಕಿಹೊಳಿಗೆ ಏನೂ ಗೊತ್ತೇ ಇಲ್ಲ. ಸತೀಶ್ ಜಾರಕಿಹೊಳಿ ಫ್ಯಾಮಿಲಿ ವಾಮಾಚಾರದ ಫ್ಯಾಮಿಲಿ. ಸ್ಮಶಾನವನ್ನು ಪ್ರೀತಿಸುತ್ತಾರೆ. ಅವರು ಸಂಸ್ಕೃತಿಯನ್ನು, ನಮ್ಮ ಸೂಕ್ಷ್ಮತೆಯನ್ನು ಒಪ್ಪದವರು. ಮಾಟ, ಮಂತ್ರ, ಮಾಯಾಜಾಲ ಮಾಡುವಂತವರು. ಹಾಗಾಗಿ ಅವರಿಗೆ ಸೂಕ್ಷ್ಮತೆ, ಹಿಂದೂ ಸಂಸ್ಕೃತಿ ಆಚಾರ ವಿಚಾರಗಳು ಅರ್ಥವಾಗಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಅದೇ ಮುಸ್ಲಿಂ ಧರ್ಮದಲ್ಲಿ ಯಾರಾದರೂ ಅವರ ಧರ್ಮದ ವಿರುದ್ಧ ಮಾತನಾಡಿದರೆ ಅದರ ಪರಿಣಾಮ ಎಷ್ಟು ವಿಕೃತವಾಗಿರುತ್ತೆ ಎಂಬುದು ಗೊತ್ತಾಗುತ್ತೆ. ಹಿಂದೂಗಳು ಶಾಂತಿಪ್ರಿಯರು. ಕ್ಷಮಾ ಗುಣವುಳ್ಳವರು. ಅವರು ಕ್ಷಮಿಸಿದ್ದಾರೆ ಎಂದು ಪದೇ ಪದೇ ಮಾತನಾಡಲು ಹೋಗಬೇಡಿ. ಹಿಂದೂಗಳು ಎದ್ದು ನಿಂತರೆ ಹೇಳಲು ಹೆಸರು ಇಲ್ಲದಂತೆ ಮಾಡ್ತಾರೆ ಎಚ್ಚರ ಎಂದರು.
ಡಿಕ್ಷನರಿ ಕಂಡು ಹಿಡಿದದ್ದು ಆಂಗ್ಲರು. ಯಾರು ಏನೇ ಹೇಳಿರಲಿ ನೀವು ಈ ಮಣ್ಣಿನಲ್ಲಿ ಹುಟ್ಟಿದವರು ಸರ್ವೇಜನಾ: ಸುಖಿನೋ ಭವಂತು ಎಂಬುದು ಹಿಂದೂ ಧರ್ಮದ ಸಂಸ್ಕೃತಿ ಎಂಬ ಅರಿವಿರಬೇಕು ಎಂದು ಹೇಳಿದ್ದಾರೆ.