ಬೆಂಗಳೂರು: ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಸ್ತಬ್ಧಚಿತ್ರ ಅನುಮತಿ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಟಾಂಗ್ ನೀಡಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಸಣ್ಣ ಭಾವನೆಗಳನ್ನು ಬಿಟ್ಟು, ಕರ್ನಾಟಕದ ಬಗ್ಗೆ ಎಲ್ಲರೂ ಒಂದಾಗಬೇಕು ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ಟ್ಯಾಬ್ಲೋ ವಿಚಾರವಾಗಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿ, 2009 ರಲ್ಲಿ ಯುಪಿಎ ಸರ್ಕಾರವಿತ್ತು. ರಾಜ್ಯದಿಂದ ಕಳುಹಿಸಿದ ಸ್ಥಬ್ಧಚಿತ್ರವನ್ನು ನಿರಾಕರಿಸಲಾಗಿತ್ತು. ಕರ್ನಾಟಕದ ಬಗ್ಗೆ ಅಷ್ಟು ಸ್ವಾಭಿಮಾನ ಇರುವವರು, ಆಗ ಯಾರ ಮೇಲಾದರೂ ಒತ್ತಡ ಹೇರಿ ಸ್ಥಬ್ಧಚಿತ್ರಕ್ಕೆ ಸ್ಥಾನ ಪಡೆದುಕೊಳ್ಳಬಹುದಿತ್ತು. ಆದರೂ ಹಾಗೆ ಮಾಡಿಲ್ಲ ಯಾಕೆ ಎಂದು ಪ್ರಶ್ನಿಸಿದರು.
ಆನಂತರ 14 ವರ್ಷಗಳ ಕಾಲ ಕರ್ನಾಟಕದ ಸ್ಥಬ್ಧಚಿತ್ರ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿದೆ. ಕಳೆದ ಬಾರಿ ಪ್ರಶಸ್ತಿ ಪಡೆದವರಿಗೆ ಬೇರೆಯದರಲ್ಲಿ ಅವಕಾಶ ನೀಡಬೇಕೆಂಬ ವಿಚಾರವಿತ್ತು. ಆದರೂ ನಾನು ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ರಕ್ಷಣಾ ಸಚಿವರೊಂದಿಗೆ ಮಾತನಾಡಿ ರಾಜ್ಯದ ಸ್ತಬ್ಧ ಚಿತ್ರಕ್ಕೆ ಅನುಮತಿ ನೀಡುವಂತೆ ಮಾಡಿದ್ದೇವೆ. ನಾರಿಶಕ್ತಿ ಸ್ತಬ್ಧಚಿತ್ರ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಲಿದೆ. ಕೇವಲ 8-10ದಿನಗಳಲ್ಲಿ ನಾರಿಶಕ್ತಿ ಎಂಬ ವಿಷಯದ ಕುರಿತು ಸ್ಥಬ್ಧಚಿತ್ರ ತಯಾರಿಸಲಾಗಿದೆ ಎಂದು ತಿಳಿಸಿದರು.