ಬೆಂಗಳೂರು: ಪಶುಸಂಗೋಪನಾ ಇಲಾಖೆಯಲ್ಲಿ ನೇಮಕಾತಿ ಕುರಿತು ನಕಲಿ ನೇಮಕಾತಿ ಅಧಿಸೂಚನೆ ಹೊರಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಬೆಂಗಳೂರಿನ ಸಂಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಜ್ಞಾನದೇವ್ ಜಾಧವ್ ಎಂದು ಗುರುತಿಸಲಾಗಿದೆ. ಸಚಿವ ಪ್ರಭು ಚೌವ್ಹಾಣ್ ಅವರಿಗೆ ಕನ್ನಡ ಕಲಿಸಲೆಂದು ಈತ 2019ರಲ್ಲಿ ನೇಮಕಗೊಂಡಿದ್ದ. ಸಚಿವರು ತನಗೆ ಆಪ್ತರೆಂದು ಹೇಳಿಕೊಂಡು ಪಶುಸಂಗೋಪನಾ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಹಲವರಿಗೆ ವಂಚಿಸುತ್ತಿದ್ದ.
ಇಲಾಖೆಯ ಎಫ್ ಡಿಎ, ಎಸ್ ಡಿಎ ಹುದ್ದೆಗಳಿಗೆ ನಕಲಿ ಆದೇಶ ಪ್ರತಿ ಸೃಷ್ಟಿ ಮಾಡಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದ 63 ಜನರನ್ನು ಆರೋಪಿ ಜ್ಞಾನದೇವ್ ಆಯ್ಕೆ ಮಾಡಿ ಪಟ್ಟಿ ಸಿದ್ದ ಪಡಿಸಿದ್ದ. ಅಭ್ಯರ್ಥಿಗಳಿಂದ 2-3 ಲಕ್ಷದಂತೆ 25 ಲಕ್ಷ ರೂಪಾಯಿ ಹಣ ಪಡೆದು ವಂಚಿಸಿದ್ದ. ಸರ್ಕಾರಿ ನೇಮಕಾತಿ ಪ್ರಕ್ರಿಯೆ ಮಾದರಿಯಲ್ಲಿಯೇ ನಕಲಿ ನೇಮಕಾತಿ ಪಟ್ಟಿ ಸಿದ್ಧ ಪಡಿಸಿ ಆಕ್ಷೇಪಣೆಗಳಿದ್ದರೆ ಜುಲೈ 30ರೊಳಗೆ ಇಲಾಖೆಗೆ ಅರ್ಜಿ ಸಲ್ಲಿಸಿ ಎಂದು ಆದೇಶವನ್ನು ಹೊರಡಿಸಿದ್ದ. ಅಭ್ಯರ್ಥಿಗಳು ಇಲಾಖೆಯನ್ನು ಸಂಪರ್ಕಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.