ಬೆಂಗಳೂರು: 545 ಪಿಎಸ್ಐ ಹುದ್ದೆ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು, ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಅವರನ್ನು ಸರ್ಕಾರ ವಜಾಗೊಳಿಸಿ, ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿದೆ. ಆರೋಪಿಗಳಾದ ದರ್ಶನ್ ಗೌಡ, ನಾಗೇಶ್ ಗೌಡ ಇಬ್ಬರೂ ಸಚಿವ ಅಶ್ವತ್ಥನಾರಾಯಣ ಸಂಬಂಧಿಕರಾಗಿದ್ದಾರೆ. ಇಬ್ಬರನ್ನು ಸಿಐಡಿ ವಿಚಾರಣೆ ನಡೆಸಿ ಬಿಟ್ಟು ಕಳುಹಿಸಿದೆ. ಬಂಧಿಸಿ ಕ್ರಮ ಕೈಗೊಂಡಿಲ್ಲ ಯಾಕೆ ? ಪ್ರಕರಣದಲ್ಲಿ ಸ್ವತಃ ಸಚಿವರು ಹಾಗೂ ಸಚಿವರ ಸಹೋದರ ಭಾಗಿಯಾಗಿದ್ದಾರೆ. ಸರ್ಕಾರ ತಕ್ಷಣ ಸಚಿವ ಅಶ್ವತ್ಥ ನಾರಾಯಣ ಅವರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಪಿಎಸ್ಐ ಹುದ್ದೆ ನೇಮಕಾತಿಯಲ್ಲಿ 300 ಕೋಟಿ ಹಗರಣ ನಡೆದಿದೆ ಎಂದು ಹೇಳಲಾಗುತ್ತಿದೆ. ಪಿಎಸ್ಐ ನೇಮಕಾತಿ ಮಾತ್ರವಲ್ಲ ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿಯಲ್ಲಿಯೂ ಅಕ್ರಮ ನಡೆದಿರುವುದು ಬಯಲಾಗುತ್ತಿದೆ. ಪಿಎಸ್ಐ ಹುದ್ದೆ ಅಕ್ರಮ ಪ್ರಕರಣಕ್ಕೆ ಸಿಐಡಿ ತನಿಖೆಯಿಂದ ನ್ಯಾಯ ಸಿಗಲು ಸಾಧ್ಯವಿಲ್ಲ. ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಸಿಟ್ಟಿಂಗ್ ಜಡ್ಜ್ ನೇತೃತ್ವದಲ್ಲಿ ತನಿಖೆ ನಡೆಸಲಿ. ನಮ್ಮ ಬಳಿ ಇರುವ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡುತ್ತೇವೆ ಎಂದರು.
ಕಲಬುರ್ಗಿಯ ಜ್ಞಾನಜ್ಯೋತಿ ಶಾಲೆ ಪರೀಕ್ಷೆಗೆ ಯೋಗ್ಯವಾಗಿಲ್ಲ ಎಂದು ವರದಿಯಿದೆ. ಆದರೂ ಆ ಶಾಲೆಗೆ ಪಿಎಸ್ಐ ನೇಮಕಾತಿ ಪರೀಕ್ಷೆಗೆ ಅನುಮತಿ ನೀಡಿದ್ದು ಯಾಕೆ ? ಸ್ಥಳೀಯ ಪೊಲೀಸರ ಸಹಕಾರವಿಲ್ಲದೇ ಪರೀಕ್ಷೆ ಬರೆಸಲು ಕಾರಣವೇನು ? ಇಷ್ಟೆಲ್ಲ ಅಕ್ರಮಕ್ಕೆ ಸರ್ಕಾರವೇ ಹೊಣೆಯಾಗಿರುವಾಗ ಗೃಹ ಸಚಿವರು ಹೊಣೆಗಾರರಲ್ಲವೇ ? ಅಕ್ರಮದ ಬಗ್ಗೆ ಡಿಜಿ-ಐಜಿಪಿ ಪತ್ರ ಬರೆದರೂ ಕ್ರಮ ಕೈಗೊಂಡಿಲ್ಲ. ಪಶುಸಂಗೋಪನಾ ಸಚಿವ ಪ್ರಭುಚೌಹಾಣ್ ಫೆ.3ರಂದು ಪತ್ರ ಬರೆದಿದ್ದಾರೆ. ಅಫಜಲಪುರ ತಾಲೂಕಿನ 40 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಪರೀಕ್ಷಾ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಉಲ್ಲೇಖಿಸಿದ್ದರೂ ಆದರೂ ಕ್ರಮಕ್ಕೆ ಮುಂದಾಗಿಲ್ಲ. ಪ್ರಕರಣದ ಹೊಣೆ ಹೊತ್ತು ಗೃಹ ಸಚಿವರು ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.