ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಕಾಂಗ್ರೆಸ್ ನಾಯಕ ಎಂ.ಬಿ. ಪಾಟೀಲ್ ಅವರನ್ನು ಭೇಟಿಯಾಗಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದೆ.
ಸಚಿವ ಅಶ್ವತ್ಥನಾರಾಯಣ ಅವರು ಎಂ.ಬಿ. ಪಾಟೀಲ್ ಅವರನ್ನು ಭೇಟಿಯಾಗಿದ್ದಾರೆ. ತಮ್ಮ ರಕ್ಷಣೆಗಾಗಿ ಸಚಿವರು ನಮ್ಮ ನಾಯಕರನ್ನು ಭೇಟಿಯಾಗಿರಬೇಕು. ಸಹಾಯಕ ಪ್ರಾಧ್ಯಾಪಕ ಹುದ್ದೆ, ಪಿಎಸ್ಐ ಹುದ್ದೆ ಅಕ್ರಮದ ಬಗ್ಗೆ ಕಾಂಗ್ರೆಸ್ ನವರು ತಮ್ಮ ವಿರುದ್ಧ ಏನೂ ಮಾತನಾಡಬಾರದು ಎಂಬ ಕಾರಣಕ್ಕೆ ಭೇಟಿಯಾಗಿದ್ದಾರೆ. ಇದೆಲ್ಲ ರಾಜಕೀಯ, ಆ ಮೇಲೆ ವೈಯಕ್ತಿಕ ಭೇಟಿ ಎಂದು ಹೇಳಿಕೆ ಕೊಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಆದರೆ ಮಾಜಿ ಸಚಿವ ಎಂ.ಬಿ. ಪಾಟೀಲ್, ಡಿ.ಕೆ. ಶಿವಕುಮಾರ್ ಹೇಳಿಕೆ ತಳ್ಳಿಹಾಕಿದ್ದು, ಅಶ್ವತ್ಥನಾರಾಯಣ ನನ್ನನ್ನು ಭೇಟಿಯಾಗಿಲ್ಲ. ಅಶ್ವತ್ಥನಾರಾಯಣ ಅವರಿಗೆ ನನ್ನಿಂದ ಏನು ರಕ್ಷಣೆ ಸಿಗುತ್ತೆ ? ಅಥವಾ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಅವರಿಂದಲಾದರೂ ಯಾವ ರಕ್ಷಣೆ ಸಿಗುತ್ತೆ ? ಎಂದು ಪ್ರಶ್ನಿಸಿದ್ದಾರೆ.
ಕಳೆದ 6 ತಿಂಗಳಿಂದ ನಾನು ಅಶ್ವತ್ಥನಾರಾಯಣ ಅವರನ್ನು ಭೇಟಿಯಾಗಿಲ್ಲ. ಭೇಟಿಯಾಗಬಾರದು ಎಂದೇನೂ ಇಲ್ಲ. ಡಿ.ಕೆ. ಶಿವಕುಮಾರ್ ಹಾಗೆ ಹೇಳಿದ್ದರೆ ಅವರ ಜತೆ ಮಾತನಾಡುತ್ತೇನೆ ಎಂದು ಹೇಳಿದರು.
ಇನ್ನು ಎಂ.ಬಿ. ಪಾಟೀಲ್ ಭೇಟಿ ವಿಚಾರವಾಗಿ ಸ್ಪಷ್ಟನೆ ನೀಡಿರುವ ಸಚಿವ ಅಶ್ವತ್ಥನಾರಾಯಣ, ನಾನು ಎಂ.ಬಿ. ಪಾಟೀಲ್ ಭೇಟಿಯಾಗಿಲ್ಲ. ಇದೊಂದು ಸುಳ್ಳು ಸುದ್ದಿ. ಎಂ.ಬಿ. ಪಾಟೀಲ್ ಅವರನ್ನು ಭೇಟಿಯಾಗಿ ರಕ್ಷಣೆ ಪಡೆಯುವ ಅವಶ್ಯಕತೆ ನನಗೆ ಇಲ್ಲ. ಡಿಕೆಶಿ ಅವರದ್ದು ಸುಳ್ಳು ಹೇಳಿಕೆ ಎಂದು ತಿಳಿಸಿದ್ದಾರೆ.