ಮಂಡ್ಯ: ಸುಮಲತಾ ಅವರಿಗೆ ಸಂಸದರಾಗಿ ಏನು ಮಾಡಬೇಕು ಯಾವೆಲ್ಲ ಯೋಜನೆಗಳನ್ನು, ಅನುದಾನವನ್ನು ತರಬೇಕು ಎಂಬ ಬಗ್ಗೆ ಜವಾಬ್ದಾರಿ ಅರಿವಿಲ್ಲ. ಶಾಸಕರ ಕೆಲಸವನ್ನು ನಾನು ಮಾಡುತ್ತಿದ್ದೇನೆ ಎಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರವೀಂದ್ರ ಶ್ರೀಕಂಠಯ್ಯ, ಶಾಸಕರಿಗೆ, ಸಂಸದರಿಗೆ ಅನುದಾನ ಬರುತ್ತೆ ಅದನ್ನು ಬಿಟ್ಟು ಬೇರೆ ಅನುದಾನ ಏನು ತಂದಿದ್ದೀರಾ? ಮಂತ್ರಿಗಳ ಬಳಿ ಹೋಗಿ ಲೆಟರ್ ಹೆಡ್ ನಲ್ಲಿ ಬರೆದುಕೊಂಡು ಪತ್ರ ನೀಡಿ ಫೋಟೋ ತೆಗೆಸಿಕೊಂಡು ಫೇಸ್ ಬುಕ್ ನಲ್ಲಿ ಹಾಕಿಸಿಕೊಂಡರೆ ಜಿಲ್ಲೆಗೆ ಪ್ರಯೋಜನವಿಲ್ಲ. ರೈಲ್ವೆ ಯೋಜನೆಗೆ ದಕ್ಷಿಣ ಭಾರತಕ್ಕೆ 55 ಕೋಟಿ, ಉತ್ತರ ಭಾರತಕ್ಕೆ 13,000 ಕೋಟಿ ಬಿಡುಗಡೆಯಾಗಿದೆ. ಸಂಸದರಾಗಿ ನೀವು ಏನು ಮಾಡುತ್ತೀದ್ದೀರಿ? ಯಾವ ಹೊಸ ಯೋಜನೆಯನ್ನು ರಾಜ್ಯಕ್ಕೆ ಅಥವಾ ಜಿಲ್ಲೆಗೆ ತಂದಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.
ಕೆ.ಆರ್.ನಗರದಲ್ಲಿ ಸ್ಟೇಟ್ ಫಂಡ್ ಕಾಮಗಾರಿ ಪೂಜೆ ಮಾಡಲು ಹೋಗಿದ್ದಾರೆ. ಅದು ಕೂಡ ಶಾಸಕರನ್ನು ಬಿಟ್ಟು ಹೋಗಿದ್ದಾರೆ. ಮಂಡ್ಯ ಜಿಲ್ಲೆಯ ಸಂಸದರಾಗಿ ಜಿಲ್ಲೆಗೆ ಯಾವ ಕೊಡುಗೆ ಕೊಡುತ್ತಾರೆ ಎಂದು ಜನರು ಕಾಯುತ್ತಿದ್ದಾರೆ. ಆದರೆ ಇವರು ಜಿಲ್ಲಾ ಅಭಿವೃದ್ಧಿ ಮಾಡುವುದನ್ನು ಬಿಟ್ಟು ಸಮುದಾಯ ಭವನಕ್ಕೆ ಅನುದಾನ ಕೊಟ್ಟಿದ್ದಾಗಿ ಹೇಳುತ್ತಿದ್ದಾರೆ. ಯಾವುದೋ ಭ್ರಮೆಯ ಲೋಕದಲ್ಲಿ ಸುಮಲತಾ ಇದ್ದಂತೆ ಕಾಣುತ್ತಿದೆ. ಯಾರೇ ಸಂಸದರಾದರೂ ಎಂ.ಪಿ ಫಂಡ್ ಬರುತ್ತೆ. ಅಂಬರೀಶ್ ಪತ್ನಿ ಎಂದು ಸಂಸದರಾಗಿ ಆಯ್ಕೆಯಾದರು ಆದರೆ ಅದು ಎಲ್ಲಾ ಕಾಲಕ್ಕೂ ನಡೆಯಲ್ಲ, ಜನ ಉತ್ತರ ಕೊಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.