ಬೆಂಗಳೂರು: ಸಚಿವ ಅಶ್ವತ್ಥನಾರಾಯಣ ಹಾಗೂ ಕಾಂಗ್ರೆಸ್ ನಾಯಕ ಎಂ.ಬಿ.ಪಾಟೀಲ್ ಭೇಟಿ ವಿಚಾರವಾಗಿ ಆರೋಪ ಮಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಎಂ.ಬಿ.ಪಾಟೀಲ್ ಇದೀಗ ಒಟ್ಟಿಗೆ ಕಾಣಿಸಿಕೊಂಡಿದ್ದು, ಅಸಮಾಧಾನಕ್ಕೆ ತೆರೆ ಎಳೆದಿದ್ದಾರೆ.
ಪಿ ಎಸ್ ಐ ಅಕ್ರಮ, ಸಹಾಯಕ ಪ್ರಾಧ್ಯಾಪಕ ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಕಾಂಗ್ರೆಸ್ ನವರು ಏನೂ ಮಾತನಾಡಬಾರದು ಎಂದು ರಕ್ಷಣೆ ಪಡೆಯಲು ಸಚಿವ ಅಶ್ವತ್ಥನಾರಾಯಣ ಅವರು ಎಂ.ಬಿ.ಪಾಟೀಲ್ ಭೇಟಿಯಾಗಿದ್ದರು ಎಂದು ಡಿ.ಕೆ.ಶಿವಕುಮಾರ್ ನೀಡಿದ್ದ ಹೇಳಿಕೆ ಭಾರಿ ಚರ್ಚೆಗೆ ಕಾರಣವಾಗಿತ್ತು. ಸ್ವಪಕ್ಷದ ನಾಯಕನ ವಿರುದ್ಧವೇ ಡಿ.ಕೆ.ಶಿ ಆರೋಪ ಅಸಮಾಧಾನಕ್ಕೂ ಕಾರಣವಾಗಿತ್ತು. ಇದೀಗ ಎಲ್ಲದಕ್ಕೂ ತೆರೆ ಎಳೆಯುವ ಪ್ರಯತ್ನ ನಡೆದಿದೆ. ರಾಜಸ್ಥಾನದ ಉದಯಪುರದಲ್ಲಿ ಕಾಂಗ್ರೆಸ್ ಚಿಂತನಾ ಶಿಬಿರ ನಡೆಯುತ್ತಿದ್ದು, ಮುಂಬರುವ ಚುನಾವಣೆಗೆ ಸಿದ್ಧತೆ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಭೆ ನಡೆದಿದೆ. ಈ ಸಂದರ್ಭದಲ್ಲಿಯೇ ಡಿ.ಕೆ.ಶಿವಕುಮಾರ್ ಹಾಗೂ ಎಂ.ಬಿ.ಪಾಟೀಲ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ ಮಾತ್ರವಲ್ಲ. ಎಂ.ಬಿ.ಪಾಟೀಲ್ ಹೆಗಲ ಮೇಲೆ ಕೈಹಾಕಿ ಡಿ.ಕೆ.ಶಿವಕುಮಾರ್ ಕ್ಯಾಮರಾಗೆ ಪೋಸ್ ನೀಡಿದ್ದಾರೆ.
ಸಚಿವರ ಭೇಟಿ ಜಟಾಪಟಿ ಬಳಿಕ ವಿಪಕ್ಷ ನಾಯಕ ಸಿದ್ದರಾಮಯ್ಯನವರೇ ಇಬ್ಬರು ನಾಯಕರನ್ನು ಸಮಾಧಾನ ಪಡಿಸಿದ್ದಾರೆ. ರಾತ್ರಿ ನಡೆದ ಭೋಜನ ಕೂಟದಲ್ಲಿಯೂ ಈ ಬಗ್ಗೆ ಚರ್ಚೆ ನಡೆದಿದೆ. ಅಂತಿಮವಾಗಿ ಡಿ.ಕೆ.ಶಿವಕುಮಾರ್ ಹಾಗೂ ಎಂ.ಬಿ.ಪಾಟೀಲ್ ಒಟ್ಟಿಗೆ ಕಾಣಿಸಿಕೊಂಡು ಡ್ಯಾಮೆಜ್ ಕಂಟ್ರೋಲ್ ಗೆ ಮುಂದಾಗಿದ್ದಾರೆ ಎನ್ನಲಾಗಿದೆ.