ಬೆಂಗಳೂರು: ಪಿಎಸ್ಐ ನೇಮಕಾತಿ ಹಗರಣದಲ್ಲಿನ ಸತ್ಯವನ್ನು ನಾವು ಹೇಳಿದ್ದೇವೆ. ದರ್ಶನ್ ಗೌಡ ಅವರನ್ನು ಈ ಹಿಂದೆ ವಶಕ್ಕೆ ಪಡೆದ ಸಿಐಡಿ ಅಧಿಕಾರಿಗಳು ಸಚಿವರ ಪ್ರಭಾವಕ್ಕೆ ಮಣಿದು ಬಿಟ್ಟು ಕಳುಹಿಸಿದ್ದರು. ಈಗ ಮತ್ತೆ ವಿಚಾರಣೆ ಮಾಡಿ ಬಂಧಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಬರಿ ಇದು ಒಂದು ಮಾಹಿತಿಯಲ್ಲ ಸಾಕಷ್ಟು ಮಾಹಿತಿ, ದಾಖಲೆಗಳು ನಮ್ಮ ಬಳಿ ಇದೆ. ಪಿಎಸ್ಐ ಅಕ್ರಮದಲ್ಲಿ ಸ್ವತಃ ಸಚಿವರು, ಅಧಿಕಾರಿಗಳು ಭಾಗಿಯಾಗಿದ್ದಾರೆ. ಹಗರಣಕ್ಕೆ ಕಾರಣರಾದವರ ವಿರುದ್ಧ ಮೊದಲು ಕೇಸ್ ಹಾಕಲಿ ಒಂದು ವೇಳೆ ಸರ್ಕಾರ ಕೇಸ್ ಹಾಕಿ ಕ್ರಮ ಕೈಗೊಳ್ಳದಿದ್ದರೆ ನಾವು ಸುದ್ದಿಗೋಷ್ಠಿ ನಡೆಸಿ ಏನು ಮಾಡಬೇಕೋ ಮಾಡುತ್ತೇವೆ ಎಂದರು.
ಮುಖ್ಯಮಂತ್ರಿಗಳು ಯಾರನ್ನು ರಕ್ಷಣೆ ಮಾಡುತ್ತಾರೆ ಮಾಡಲಿ. ಆನಂತರ ಮಾತನಾಡುತ್ತೇವೆ ನೋಡೋಣ. ಹಗರಣದಲ್ಲಿ ಭಾಗಿಯಾದವರ ಬಗ್ಗೆ ಯಾವ ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂಬುದನ್ನು ನೋಡಬೇಕಿದೆ ಎಂದು ಹೇಳಿದರು.