ಬೆಂಗಳೂರು: ರಾಜ್ಯದಲ್ಲಿರುವ ಮದರಸಾ, ಉರ್ದು ಶಾಲೆಗಳಂತೆಯೇ ಸಂಸ್ಕೃತ ಶಾಲೆಗಳನ್ನು ಆರಂಭಿಸುವಂತೆ ಹಿಂದೂಪರ ಸಂಘಟನೆಗಳು ಶಿಕ್ಷಣ ಇಲಾಖೆಗೆ ಮನವಿ ಮಾಡಿವೆ.
ಶಾಲಾ ಪಠ್ಯ ಪುಸ್ತಕದಲ್ಲಿ ಭಗವದ್ಗೀತೆ ಸೇರಿಸುವ ವಿಚಾರವಾಗಿ ಭಾರಿ ಚರ್ಚೆ ನಡೆದಿರುವಾಗಲೇ ಶಿಕ್ಷಣ ಇಲಾಖೆ ಶಾಲಾ-ಕಾಲೇಜುಗಳಲ್ಲಿ ಧ್ಯಾನವನ್ನು ಕಡ್ಡಾಯ ಮಾಡಿ ಆದೇಶ ಹೊರಡಿಸಿರುವುದು ಹೊಸ ಚರ್ಚೆಗೆ ಕಾರಣವಾಗಿತ್ತು. ಅಲ್ಲದೇ ಇಸ್ಲಾಂ ಧರ್ಮದವರು ಶಾಲೆಗಳಲ್ಲಿ ಧ್ಯಾನಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಶಿಕ್ಷಣ ಇಲಾಖೆ ಮೇಲೆ ಮತ್ತೊಂದು ಒತ್ತಡ ಹೇರಲು ಮುಂದಾಗಿರುವ ಹಿಂದೂಪರ ಸಂಘಟನೆಗಳು ಉರ್ದು ಶಾಲೆಗಳನ್ನು ಸ್ಥಾಪಿಸಿರುವಂತೆಯೇ ರಾಜ್ಯದಲ್ಲಿ ಸಂಸ್ಕೃತ ಶಾಲೆ ಸ್ಥಾಪಿಸುವಂತೆ ಮನವಿ ಮಾಡಿದೆ.
ಸಂಸ್ಕೃತ ಬೋಧನೆ ಜೊತೆಗೆ ಮಕ್ಕಳಿಗೆ ಹಿಂದೂ ಸಂಸ್ಕೃತಿ, ಆಚಾರ ವಿಚಾರ, ಹಬ್ಬಗಳು, ಪುರಾಣ, ಪೂಜಾ ಪದ್ಧತಿ, ರಾಮಾಯಣ, ಭಗವದ್ಗೀತೆ, ಯೋಗ, ಧ್ಯಾನದ ಬಗ್ಗೆಯೂ ಹೇಳಿಕೊಡಬೇಕು ಎಂದು ಒತ್ತಾಯಿಸಿದೆ. ಒಟ್ಟಾರೆ ರಾಜ್ಯದಲ್ಲಿ ಸಂಸ್ಕೃತ ಶಾಲೆ ಆರಂಭವಾಗಲಿದೆಯೇ ಕಾದುನೋಡಬೇಕಿದೆ.