ತಮ್ಮ ಪಕ್ಷದ ನಾಯಕ ರಾಹುಲ್ ಗಾಂಧಿಯವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನೆಪದಲ್ಲಿ ಕಛೇರಿಗೆ ಕರೆಸಿಕೊಂಡು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರತಿಭಟನೆ ನಡೆಸುವ ಸಲುವಾಗಿ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಎಐಸಿಸಿ ಕಛೇರಿಗೆ ತೆರಳುತ್ತಿದ್ದ ವೇಳೆ ದೆಹಲಿ ಪೊಲೀಸರು ಅಕ್ಷರಶಃ ಅವರನ್ನು ಹಿಡಿದು ಎಳೆದಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಡಿ.ಕೆ. ಸುರೇಶ್ ಅವರನ್ನು ವಶಕ್ಕೆ ಪಡೆಯಲು ದೆಹಲಿ ಪೊಲೀಸರು ಮುಂದಾಗಿದ್ದಾರೆ. ಈ ವೇಳೆ ನಮ್ಮನ್ನು ಬಂಧಿಸಲು ಪರ್ಮಿಶನ್ ಇದೆಯಾ ಎಂದು ಡಿ.ಕೆ. ಸುರೇಶ್ ಎದುರಿಗಿದ್ದ ಅಧಿಕಾರಿಯನ್ನು ಪ್ರಶ್ನಿಸುತ್ತಿರುವಾಗ ಹಿಂದಿನಿಂದ ಅವರನ್ನು ಮತ್ತೊಬ್ಬ ಅಧಿಕಾರಿ ಜೋರಾಗಿ ತಳ್ಳಿದ್ದಾರೆ. ಬಳಿಕ ಮೂರ್ನಾಲ್ಕು ಜನ ಸೇರಿಕೊಂಡು ಅವರನ್ನು ಪೊಲೀಸ್ ವ್ಯಾನ್ ನೊಳಗೆ ತಳ್ಳಿದ್ದಾರೆ.