ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸುವ ವೇಳೆ ಸಾರ್ವಜನಿಕ ಆಸ್ತಿಪಾಸ್ತಿ ನಾಶ ಮಾಡಿರುವ ಆರೋಪದ ಮೇಲೆ ಸಂಸದ, ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಸೇರಿದಂತೆ 30 ಬಿಜೆಪಿ ಕಾರ್ಯಕರ್ತರ ವಿರುದ್ಧ ದೆಹಲಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಒಂದು ಸಾವಿರ ಪುಟಗಳ ಈ ಚಾರ್ಜ್ ಶೀಟ್ ನಲ್ಲಿ ಗುಂಪು ಕಟ್ಟಿಕೊಂಡು ಬಂದು ಸಾರ್ವಜನಿಕ ಆಸ್ತಿಪಾಸ್ತಿ, ನಾಶ ಮಾಡಿರುವ ಆರೋಪ ಹೊರೆಸಲಾಗಿದೆ. ಇದೀಗ ಇದೇ ವಿಷಯವನ್ನು ಇಟ್ಟುಕೊಂಡು ಕಾಂಗ್ರೆಸ್, ಸಂಸದ ತೇಜಸ್ವಿ ಸೂರ್ಯ ಹಾಗೂ ರಾಜ್ಯ ಬಿಜೆಪಿ ನಾಯಕರನ್ನು ಟ್ವೀಟ್ ಮೂಲಕ ಕುಟುಕಿದೆ.
ದೆಹಲಿಯಲ್ಲಿ ದೊಂಬಿ ನಡೆಸಿ ಸಾರ್ವಜನಿಕ ಆಸ್ತಿಯನ್ನು ನಾಶಪಡಿಸಿದ ತೇಜಸ್ವಿ ಸೂರ್ಯ ಅವರೇ, ಹಿಂದೆ ನೀವೇ ಒತ್ತಾಯಿಸಿದಂತೆ ಈಗ ನಿಮ್ಮ ಮೇಲೆಯೂ ಯುಪಿ ಮಾಡೆಲ್ ಜಾರಿ ಆಗಬೇಕಲ್ಲವೇ ಎಂದು ಪ್ರಶ್ನಿಸಿದೆ.
ಜೊತೆಗೆ, ಸಂಸದರ ಮನೆ ಮೇಲೆ ಬುಲ್ಡೋಜರ್ ನುಗ್ಗಿಸುವುದು ಯಾವಾಗ ಆಸ್ತಿ ಮುಟ್ಟುಗೋಲು ಯಾವಾಗ ಬಿಜೆಪಿ ಕರ್ನಾಟಕ ? ಬೇಗ ತೇಜಸ್ವಿ ರವರ ಯುಪಿ ಮಾಡೆಲ್ ಆಸೆಯನ್ನು ನೆರವೇರಿಸಿ ಎಂದು ಕಾಂಗ್ರೆಸ್ ಹೇಳಿದೆ.