ಮಹಿಳೆಯರು ಸೇವಿಸುವಂತಹ ಗರ್ಭನಿರೋಧಕ ಮಾತ್ರೆಗಳ ಬಗ್ಗೆ ನಮಗೆಲ್ಲಾ ತಿಳಿದಿದೆ. ಇದೀಗ ಯಶಸ್ವಿ ಪುರುಷ ಗರ್ಭನಿರೋಧಕ ಮಾತ್ರೆಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಗರ್ಭಧಾರಣೆಯಾಗದಂತೆ ವೀರ್ಯವನ್ನು ಟ್ರ್ಯಾಕ್ನಲ್ಲಿ ಯಶಸ್ವಿಯಾಗಿ ನಿಲ್ಲಿಸಬಲ್ಲ ಸಾಮರ್ಥ್ಯವಿರುವ ಮಾತ್ರೆ ಇದು. ಪುರುಷ ಗರ್ಭನಿರೋಧಕಗಳ ಮೂಲಕವೂ ಸಾಧ್ಯ ಎಂಬುದನ್ನು ಇದು ಸಾಬೀತುಪಡಿಸಿದೆ.
ಈ ಆವಿಷ್ಕಾರವನ್ನು ಗರ್ಭನಿರೋಧಕಗಳಿಗೆ “ಗೇಮ್ ಚೇಂಜರ್” ಎಂದೇ ಕರೆಯಲಾಗುತ್ತಿದೆ. ನೇಚರ್ ಕಮ್ಯುನಿಕೇಷನ್ಸ್ ಜರ್ನಲ್ನಲ್ಲಿ ಈ ಬಗೆಗಿನ ಅಧ್ಯಯನದ ಫಲಿತಾಂಶಗಳನ್ನು ಪ್ರಕಟಿಸಲಾಗಿದೆ. ವೆಯಿಲ್ ಕಾರ್ನೆಲ್ ಮೆಡಿಸಿನ್ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಅಧ್ಯಯನದ ಸಹ-ಹಿರಿಯ ಲೇಖಕರಾದ ಡಾ. ಜೋಚೆನ್ ಬಕ್ ಮತ್ತು ಡಾ. ಲೋನಿ ಲೆವಿನ್, ಇಬ್ಬರೂ ಇನ್ಸ್ಟಿಟ್ಯೂಟ್ನಲ್ಲಿ ಫಾರ್ಮಾಕಾಲಜಿ ಪ್ರಾಧ್ಯಾಪಕರು.
ಈ ಆವಿಷ್ಕಾರ ನಿಜಕ್ಕೂ ಅದ್ಭುತ ಎಂದವರು ಬಣ್ಣಿಸಿದ್ದಾರೆ. ಪ್ರಸ್ತುತ 2000 ವರ್ಷಗಳಿಂದ ಅಸ್ತಿತ್ವದಲ್ಲಿದ್ದ ಸಂತಾನಹರಣಗಳು ಮತ್ತು ಕಾಂಡೋಮ್ಗಳು ಪುರುಷರಿಗೆ ಗರ್ಭನಿರೋಧಕ ವಿಧಾನಗಳಾಗಿದ್ದವು. ಈ ಹಿಂದೆ ಪುರುಷರಿಗಾಗಿ ಮೌಖಿಕ ಗರ್ಭನಿರೋಧಕಗಳ ಬಗ್ಗೆ ಸಂಶೋಧನೆ ನಡೆದಿದ್ದರೂ ಅದು ಯಶಸ್ಸು ತಂದುಕೊಟ್ಟಿರಲಿಲ್ಲ. ಸುರಕ್ಷತೆ ಮತ್ತು ಅಡ್ಡಪರಿಣಾಮಗಳಿಲ್ಲ ಎಂಬುದು ಖಚಿತಪಟ್ಟರೆ ಈ ಮೌಖಿಕ ಪುರುಷ ಗರ್ಭನಿರೋಧಕ ಮಾತ್ರೆ ನಿಜಕ್ಕೂ ಪರಿಣಾಮಕಾರಿ ಎನ್ನುತ್ತಾರೆ ಸಂಶೋಧಕರು.
ಈ ಮಾತ್ರೆಗಳ ಸೇವನೆಯಿಂದ ಗರ್ಭಧಾರಣೆಗೆ ಸಂಬಂಧಿಸಿದ ಅಪಾಯಗಳನ್ನು ಪುರುಷರು ಹೊಂದುವುದಿಲ್ಲ. ಹಾಗಾಗಿ ಅಡ್ಡಪರಿಣಾಮ ಕೂಡ ಕಡಿಮೆಯೇ ಎಂದು ಹೇಳಲಾಗುತ್ತಿದೆ. ಇದು ಮಾನವರ ಕ್ಲಿನಿಕಲ್ ಪ್ರಯೋಗಗಳಿಗೆ ಅಡಿಪಾಯ ಹಾಕಿದೆ. ಪುರುಷರು ಯಾವುದೇ ಹಿಂಜರಿಕೆಯಿಲ್ಲದೆ ಈ ಮಾತ್ರೆಗಳನ್ನು ಖರೀದಿಸುವ ಮೂಲಕ ಜನಸಂಖ್ಯಾ ನಿಯಂತ್ರಣಕ್ಕೆ ಸಹಕರಿಸಬಹುದು.
ಇಲಿಗಳ ಮೇಲೆ ಪ್ರಯೋಗಿಸಿದಾಗ ಈ ಔಷಧವು ಎರಡೂವರೆ ಗಂಟೆಗಳವರೆಗೆ ವೀರ್ಯವನ್ನು ನಿಷ್ಕ್ರಿಯಗೊಳಿಸುವ ಸಾಮರ್ಥ್ಯವನ್ನು ತೋರಿಸಿದೆ. ಇದರ ಪರಿಣಾಮಗಳು ಸ್ತ್ರೀಯರ ಸಂತಾನೋತ್ಪತ್ತಿ ಪ್ರದೇಶದಲ್ಲೂ ಇರುತ್ತವೆ ಎಂಬುದು ಕಂಡುಬಂದಿದೆ. ಮೂರು ಗಂಟೆಗಳ ಅವಧಿಯ ನಂತರ ಕೆಲವು ವೀರ್ಯಾಣುಗಳು ಚಲನಶೀಲತೆಯನ್ನು ಮರಳಿ ಪಡೆಯಲು ಪ್ರಾರಂಭಿಸುತ್ತದೆ. 24 ಗಂಟೆಗಳ ಹೊತ್ತಿಗೆ ಬಹುತೇಕ ಎಲ್ಲಾ ವೀರ್ಯಾಣುಗಳು ಸಾಮಾನ್ಯ ಚಲನೆಗೆ ಮರಳುತ್ತವೆ.
ಇದು ಇಲಿಗಳ ಸಂಯೋಗದ ನಡವಳಿಕೆಯ ಮೇಲೆ ಪರಿಣಾಮ ಬೀರಲಿಲ್ಲ. ಈ ಅವಲೋಕನಗಳು 52 ವಿಭಿನ್ನ ಸಂಯೋಗದ ಪ್ರಯತ್ನಗಳನ್ನು ಆಧರಿಸಿವೆ. ಡಾ. ಮೆಲಾನಿ ಅವರ ಪ್ರಕಾರ, ಗರ್ಭನಿರೋಧಕವು ಸೇವಿಸಿದ 30 ರಿಂದ 60 ನಿಮಿಷಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಇತರ ಔಷಧಿಗಳು ಪರಿಣಾಮ ಬೀರಲು ವಾರಗಳ ಸಮಯ ತೆಗೆದುಕೊಂಡರೆ ಇದು ಗಂಟೆಗಳಲ್ಲೇ ಪರಿಣಾಮ ಬೀರಲಾರಂಭಿಸುತ್ತದೆ.