ಮೈಸೂರು: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಲೀನ್ ಚಿಟ್ ವಿಚಾರವಾಗಿ ಮಾತನಾಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಮೊದಲ ದಿನವೇ ಈ ಆರೋಪದಿಂದ ಮುಕ್ತನಾಗಿ ಬರುತ್ತೇನೆ ಎಂದು ನನಗೆ ಗೊತ್ತಿತ್ತು. ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ ಎಂದು ಹೇಳಿದರು.
ಆಷಾಡ ಮಾಸದ 4ನೇ ಶುಕ್ರವಾರ ಹಿನ್ನೆಲೆಯಲ್ಲಿ ಕುಟುಂಬ ಸಮೇತರಾಗಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಕೆ.ಎಸ್.ಈಶ್ವರಪ್ಪ, ನನ್ನ ವಿರುದ್ಧ ಕೇಳಿ ಬಂದಿದ್ದ ಆರೋಪ ಸುಳ್ಳು. ಪಕ್ಷಕ್ಕೆ ಮುಜುಗರವಾಗಬಾರದು ಎಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಈಗ ತನಿಖೆಯಿಂದ ಸಂಪೂರ್ಣವಾಗಿ ಆರೋಪ ಮುಕ್ತನಾಗಿದ್ದೇನೆ. ಪಕ್ಷಕ್ಕಿದ್ದ ಮುಜುಗರ ದೂರವಾಗಿದೆ ಎಂದರು.
ಬಿ ರಿಪೋರ್ಟ್ ಆದರೂ ಕಾಂಗ್ರೆಸ್ ನಾಯಕರು ಈ ಪ್ರಕರಣದ ಬಗ್ಗೆ ಟೀಕೆ ಮಾಡುತ್ತಿರುವುದು ಬೇಸರದ ಸಂಗತಿ. ಸಿಎಂ ಆಗಿದ್ದ ಸಿದ್ದರಾಮಯ್ಯನವರಿಗೆ ಪ್ರಕರಣದ ತನಿಖೆ ಹೇಗೆ ನಡೆಯುತ್ತೆ ಎಂಬುದು ಗೊತ್ತಿದೆ. ಆದರೂ ಬಿ ರಿಪೋರ್ಟ್ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ ಎಂದರು.
ಇನ್ನು ನಾನು ದೋಷಮುಕ್ತನಾಗಿದ್ದೇನೆ. ಸಚಿವ ಸ್ಥಾನ ನೀಡುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಪಕ್ಷ ಕೈಗೊಳ್ಳುವ ನಿರ್ಧಾರಕ್ಕೆ ನಾನು ಬದ್ಧ ಎಂದು ಹೇಳಿದರು.