ನಾಲ್ಕು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಯ ಜೀವಾವಧಿ ಶಿಕ್ಷೆಯನ್ನು 20 ವರ್ಷಕ್ಕೆ ಇಳಿಸಿದ ಮಧ್ಯಪ್ರದೇಶ ಹೈಕೋರ್ಟ್ ತನ್ನ ಆದೇಶವನ್ನು ಮಾರ್ಪಡಿಸಿದೆ. ಅಪರಾಧಿ ದಯೆ ತೋರಿ ಸಂತ್ರಸ್ಥೆಯನ್ನು ಜೀವಂತವಾಗಿ ಬಿಟ್ಟಿದ್ದ ಎಂದು ನ್ಯಾಯಾಲಯ ಆದೇಶದಲ್ಲಿ ಉಲ್ಲೇಖಿಸಿತ್ತು.
ಈ ಪ್ರಮಾದವನ್ನು ಗಮನಿಸಿದ ಹೈಕೋರ್ಟ್, ಅಕ್ಟೋಬರ್ 18, 2022 ರಂದು ತೀರ್ಪು ನೀಡುವಾಗ “ಅಚಾತುರ್ಯದಿಂದ ತಪ್ಪಾಗಿದೆ” ಎಂದು ಹೇಳಿದೆ. ಅತ್ಯಾಚಾರಿ ಸಂತ್ರಸ್ಥೆ ಮೇಲೆ ದಯೆ ತೋರಿದ್ದಾನೆಂಬ ಪದ ಬಳಕೆ ತಪ್ಪು ಎಂದು ಕೋರ್ಟ್ ಒಪ್ಪಿಕೊಂಡಿದೆ.
ನ್ಯಾಯಮೂರ್ತಿ ಸುಬೋಧ್ ಅಭ್ಯಂಕರ್ ಮತ್ತು ಸತ್ಯೇಂದ್ರ ಕುಮಾರ್ ಸಿಂಗ್ ಅವರ ಪೀಠ ನಂತರ ಈ ಹೇಳಿಕೆಯನ್ನು ಬದಲಿಸಿದೆ. ಅಪರಾಧಿ ಸಂತ್ರಸ್ಥೆಗೆ “ಯಾವುದೇ ದೈಹಿಕ ಗಾಯವನ್ನು ಉಂಟುಮಾಡಲಿಲ್ಲ” ಎಂದು ಹೇಳಿಕೆಯನ್ನು ಬದಲಾಯಿಸಲಾಗಿದೆ. “ಅತ್ಯಾಚಾರಿಯದ್ದು ರಕ್ಕಸ ಕೃತ್ಯವೆಂದು ನ್ಯಾಯಾಲಯ ಪರಿಗಣಿಸಿರುವ ಕಾರಣ ಮೇಲ್ಕಂಡ ತಪ್ಪು ಆ ಸನ್ನಿವೇಶದಲ್ಲಿ ನಿಸ್ಸಂಶಯವಾಗಿ ಅಚಾತುರ್ಯದಿಂದ ಕೂಡಿದೆ ಎಂಬುದು ಸ್ಪಷ್ಟವಾಗಿದೆ” ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ನಾಲ್ಕು ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿರುವ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಅಪರಾಧಿಯೊಬ್ಬ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದ. ಆತ ಬಾಲಕಿಯ ಗುಡಿಸಲಿನ ಬಳಿ ಟೆಂಟ್ನಲ್ಲಿ ವಾಸಿಸುತ್ತಿದ್ದ. ಒಂದು ರೂಪಾಯಿ ಕೊಡುವ ನೆಪದಲ್ಲಿ ಆಕೆಯನ್ನು ತನ್ನ ಟೆಂಟ್ಗೆ ಕರೆದಿದ್ದ. ಈ ವೇಳೆ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಮಗು ಜೋರಾಗಿ ಅಳುತ್ತಿರುವುದನ್ನು ಕೇಳಿ ಆಕೆಯ ತಂದೆ ಮತ್ತು ಅಜ್ಜಿ ಓಡಿ ಬಂದಿದ್ದಾರೆ. ಬಲಾತ್ಕಾರಕ್ಕೊಳಗಾಗಿದ್ದ ಮಗು ನೆಲದ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿತ್ತು. ಅತ್ಯಾಚಾರ ಎಸಗಿದ್ದ ಆರೋಪಿ ಅಲ್ಲಿಂದ ಪರಾರಿಯಾಗಿದ್ದ. ಇದನ್ನೊಂದು ರಾಕ್ಷಸ ಕೃತ್ಯವೆಂದು ಪರಿಗಣಿಸಿದ ಹೈಕೋರ್ಟ್ ಶಿಕ್ಷೆಯನ್ನು ಜೀವಾವಧಿಯಿಂದ 20 ವರ್ಷಗಳ ಸೆರೆವಾಸಕ್ಕೆ ಇಳಿಸಿದೆ.