ಕೋಲಾರ: ವಿದ್ಯಾಭ್ಯಾಸದ ಸಮಯದಲ್ಲಿ ಹಿಜಾಬ್ ವಿಚಾರ ಬಂದಿದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಯಾವುದೇ ಗೊಂದಲ, ಕುಮ್ಮಕ್ಕು ನೀಡುವವರನ್ನು ನಂಬದೇ ಪರೀಕ್ಷೆಗೆ ಹಾಜರಾಗಿ ಎಂದು ಸಂಸದ ತೇಜಸ್ವಿ ಸೂರ್ಯ ಸಲಹೆ ನೀಡಿದ್ದಾರೆ.
ಕೋಲಾರದಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ, ರಾಜಕೀಯ ಲಾಭಕ್ಕಾಗಿ ಮಾತನಾಡುವವರ ಬಗ್ಗೆ ತೆಲೆಕೆಡಿಸಿಕೊಳ್ಳಬೇಡಿ. ವಿಶೇಷವಾಗಿ ಮುಸ್ಲಿಂ ವಿದ್ಯಾರ್ಥಿನಿಯರು ಯಾರ ಮಾತಿಗೂ ಕಿವಿಗೊಡದೇ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಿರಿ. ನಾಳೆ ನಿಮ್ಮದೇ ಸ್ನೇಹಿತರು ಉನ್ನತ ಹುದ್ದೆ, ಒಳ್ಳೆಯ ಸ್ಥಾನಕ್ಕೆ ಹೋದಾಗ ನೀವು ಹಿಂದೆ ಉಳಿದಾಗ ಇಂದು ರಾಜಕೀಯಕ್ಕಾಗಿ ನಿಮ್ಮನ್ನು ಬಳಸಿಕೊಂಡವರಾರೂ ನಿಮ್ಮ ಸಹಾಯಕ್ಕೆ ಬರುವುದಿಲ್ಲ.
ಜೀವನದಲ್ಲಿ ಸಂಕಷ್ಟ ಎದುರಾದಾಗ, ಉದ್ಯೋಗ ಸಿಗದಿದ್ದಾಗ ನಿಮಗೆ ಯಾರೂ ನೆರವಿಗೆ ಬರುವುದಿಲ್ಲ. ಇದನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಅರ್ಥಮಾಡಿಕೊಂಡು ಪರೀಕ್ಷೆ ಬರೆಯಿರಿ ಎಂದು ಹೇಳಿದರು.
ವಿದ್ಯಾಭ್ಯಾಸದ ಸಂದರ್ಭದಲ್ಲಿ ಹಿಜಾಬ್, ಕಿತಾಬ್ ಎಂದು ಮಕ್ಕಳನ್ನು ದಾರಿ ತಪ್ಪಿಸುವ ಕೆಲಸವಾಗುತ್ತಿರುವುದು ದೇಶಕ್ಕೆ ಮಾಡುತ್ತಿರುವ ದ್ರೋಹ. ದುರುದ್ದೇಶಕ್ಕಾಗಿ ವಿದ್ಯಾಭ್ಯಾಸದ ದಿಕ್ಕು ತಪ್ಪಿಸುವವರ ಮಾತು ಕೆಳದೇ ಪರೀಕ್ಷೆ ಬರೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.