
ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಶ್ರೀಲಂಕಾ ಬಳಿಕ ಭಾರತದ ಮತ್ತೊಂದು ನೆರೆರಾಷ್ಟ್ರ ಅದೇ ಹಾದಿಯಲ್ಲಿ ಸಾಗ್ತಿದೆಯಾ ಎಂಬ ಅನುಮಾನ ವ್ಯಕ್ತವಾಗಿದೆ. ತನ್ನ ವಿದೇಶಿ ಕರೆನ್ಸಿ ರಿಸರ್ವ್ಸ್ ಕುಸಿತದ ಬಳಿಕ ಪಕ್ಕದ ದೇಶ ನೇಪಾಳ, ಕಾರುಗಳು, ಸೌಂದರ್ಯವರ್ಧಕಗಳು ಮತ್ತು ಚಿನ್ನ ಸೇರಿದಂತೆ ಅನಿವಾರ್ಯವಲ್ಲದ ವಸ್ತುಗಳ ಆಮದಿನ ಮೇಲೆ ಕಡಿವಾಣ ಹಾಕಿದೆ.
ಪ್ರವಾಸೋದ್ಯಮ ವೆಚ್ಚದಲ್ಲಿ ಕುಸಿತ ಮತ್ತು ವಿದೇಶದಲ್ಲಿ ಕೆಲಸ ಮಾಡುವ ನೇಪಾಳಿಗರು ಮನೆಗೆ ಕಳುಹಿಸುವ ಹಣದ ಕೊರತೆ ಸರ್ಕಾರದ ಸಾಲವನ್ನು ಹೆಚ್ಚಿಸಿದೆ ಎಂದು ಹೇಳಲಾಗ್ತಿದೆ. ತಕ್ಷಣವೇ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನೇಪಾಳದ ಆರ್ಥಿಕತೆ ಇನ್ನಷ್ಟು ಹದಗೆಡುತ್ತದೆ ಎಂದು ಅಲ್ಲಿನ ಪ್ರತಿಪಕ್ಷ ಹೇಳಿದೆ. ಶ್ರೀಲಂಕಾದಂತೆಯೇ ನೇಪಾಳವು ಆರ್ಥಿಕ ಕುಸಿತದ ಅಂಚಿನಲ್ಲಿದೆ ಎಂದು ತಜ್ಞರು ಕೂಡ ಅಭಿಪ್ರಾಯಪಟ್ಟಿದ್ದಾರೆ.
ಆದ್ರೆ ನೇಪಾಳಕ್ಕೆ ಅಂತಹ ಅಪಾಯವೇನೂ ಆಗಲಾರದು ಅಂತ ಅಲ್ಲಿನ ಹಣಕಾಸು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಚಿವ ಜನಾರ್ಧನ್ ಶರ್ಮಾ ಮಾತನಾಡಿ, ನೇಪಾಳದ ಆರ್ಥಿಕ ಅಸ್ಥಿರತೆ ಕೇವಲ ವದಂತಿ ಎಂದರು. ದೇಶದ ಆರ್ಥಿಕತೆಯು ಉತ್ಪಾದನೆ ಮತ್ತು ಆದಾಯ ವ್ಯವಸ್ಥೆಯಲ್ಲಿ ತುಲನಾತ್ಮಕವಾಗಿ ಉತ್ತಮ ಸ್ಥಾನದಲ್ಲಿದೆ ಎಂದು ಪ್ರತಿಪಾದಿಸಿದ್ದಾರೆ. ಈ ಮಧ್ಯೆ ನೇಪಾಳ ಸರ್ಕಾರ ಕಳೆದ ವಾರ, ಅಲ್ಲಿನ ಕೇಂದ್ರ ಬ್ಯಾಂಕ್ ಗವರ್ನರ್ ಅನ್ನು ಸಕಾರಣವಿಲ್ಲದೇ ವಜಾ ಮಾಡಿದೆ.
ನೇಪಾಳ ರಾಷ್ಟ್ರ ಬ್ಯಾಂಕ್ ಪ್ರಕಾರ, ಏಳು ತಿಂಗಳ ಅವಧಿಯಲ್ಲಿ ಇಲ್ಲಿನ ವಿದೇಶಿ ಕರೆನ್ಸಿ ರಿಸರ್ವ್ಸ್ ಶೇ.16ಕ್ಕಿಂತ್ಲೂ ಹೆಚ್ಚು ಕುಸಿತ ಕಂಡಿದೆ. ಅದೇ ಅವಧಿಯಲ್ಲಿ, ವಿದೇಶದಲ್ಲಿ ಕೆಲಸ ಮಾಡುತ್ತಿರುವವರು ನೇಪಾಳಕ್ಕೆ ಕಳುಹಿಸುವ ಹಣದ ಪ್ರಮಾಣ ಕೂಡ ಸುಮಾರು 5 ಪ್ರತಿಶತದಷ್ಟು ಕಡಿಮೆಯಾಗಿದೆ. ಆದ್ರೆ ನೇಪಾಳ ಸರ್ಕಾರದ ಮೇಲೆ ಹೊರಲಾರದಂತಹ ಸಾಲದ ಭಾರವಿಲ್ಲ ಅಂತಾ ಹಣಕಾಸು ಸಚಿವರು ಸಮರ್ಥಿಸಿಕೊಂಡಿದ್ದಾರೆ. ಎಲ್ಲರೂ ನೇಪಾಳವನ್ನು ಯಾಕೆ ಶ್ರೀಲಂಕಾ ಜೊತೆಗೆ ಹೋಲಿಸ್ತಿದ್ದಾರೆ ಅನ್ನೋದು ಅರ್ಥವಾಗ್ತಿಲ್ಲ ಅಂತ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.