ಕೇಂದ್ರ ಸರ್ಕಾರದ ಮಧ್ಯಪ್ರವೇಶದ ಬಳಿಕ ಶ್ರೀಲಂಕಾ ನೌಕಾಪಡೆಯಿಂದ ಬಿಡುಗಡೆಯಾದ ಕನಿಷ್ಟ 47 ಮಂದಿ ಮೀನುಗಾರರು ಇಂದು ಬೆಳಗ್ಗೆ ಚೆನ್ನೈಗೆ ಬಂದಿಳಿದಿದ್ದಾರೆ.
ಇಂದು ಬೆಳಗ್ಗೆ ಭಾರತಕ್ಕೆ ಮರಳಿದ ಮೀನುಗಾರರು ತಮಿಳುನಾಡಿನ ರಾಮೇಶ್ವರಂ, ನಾಗಪಟ್ಟಣಂ ಹಾಗೂ ಪುದುಕೊಟ್ಟೈ ಜಿಲ್ಲೆಗಳಿಗೆ ಸೇರಿದವರು ಎನ್ನಲಾಗಿದೆ.
2021ರ ಡಿಸೆಂಬರ್ನಲ್ಲಿ ಮೀನುಗಾರಿಕೆಗೆ ತೆರಳಿದ್ದ ಈ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿತ್ತು.
ಡಿಸೆಂಬರ್ ತಿಂಗಳೊಂದರಲ್ಲೇ 56 ಮೀನುಗಾರರನ್ನು ಬಂಧಿಸಲಾಗಿದೆ. ಇದರ ಜೊತೆಯಲ್ಲಿ 9 ದೋಣಿಗಳು, ಮೀನುಗಾರಿಕೆಗೆ ಬಳಸುವ ಬಲೆಗಳು ಸೇರಿದಂತೆ ಇತರೆ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಬಂಧಿತ ಮೀನುಗಾರರನ್ನು ಶ್ರೀಲಂಕಾದ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಬಳಿಕ ಇವರನ್ನು ಜೈಲಿನಲ್ಲಿ ಇರಿಸಲಾಗಿತ್ತು.
ಮೀನುಗಾರರ ಬಂಧನದ ಬಳಿಕ ತಮಿಳುನಾಡು ಸರ್ಕಾರವು ಕೇಂದ್ರ ವಿದೇಶಾಂಗ ಸಚಿವರಿಗೆ ಪತ್ರವನ್ನು ಬರೆದಿತ್ತು. ಇದಾದ ಬಳಿಕ ಕೇಂದ್ರ ಸರ್ಕಾರ ಹಾಗೂ ತಮಿಳುನಾಡು ಸರ್ಕಾರವು ಜಂಟಿಯಾಗಿ ಶ್ರೀಲಂಕಾದಲ್ಲಿ ಸೆರೆಯಾಗಿದ್ದ ಮೀನುಗಾರರನ್ನು ಬಂಧಮುಕ್ತ ಮಾಡುವಲ್ಲಿ ಯಶಸ್ವಿಯಾಗಿದೆ.