ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತಿವೆ. ಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ, ದೇಶದಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಏಪ್ರಿಲ್ 1 ರಂದು ಘೋಷಿಸಿದ್ದ ತುರ್ತು ಪರಿಸ್ಥಿತಿಯನ್ನು ತಡರಾತ್ರಿ ಹಿಂಪಡೆದಿದ್ದಾರೆ.
ದೇಶದಲ್ಲಿನ ಆರ್ಥಿಕ ಸಂಕಷ್ಟದಿಂದ ಆಕ್ರೋಶಗೊಂಡ ಜನತೆ ಪ್ರತಿಭಟನೆಗಿಳಿದಿದ್ದರು. ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ರಾಜಪಕ್ಷೆ ತುರ್ತು ಪರಿಸ್ಥಿತಿ ಘೋಷಿಸಿದ್ದರು. ಆದ್ರೆ ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನ ಸಫಲವಾಗದೇ ಇದ್ದಿದ್ರಿಂದ ಲಂಕಾ ಸರ್ಕಾರ ದ್ವೀಪಗಳಾದ್ಯಂತ ಕರ್ಫ್ಯೂ ಜಾರಿ ಮಾಡಿತ್ತು.
ಆದ್ರೆ ಪ್ರತಿಭಟನಾಕಾರರು ಇದ್ಯಾವುದಕ್ಕೂ ಬಗ್ಗಲಿಲ್ಲ. ತುರ್ತು ಪರಿಸ್ಥಿತಿ ಆದೇಶ ಹಾಗೂ ಕರ್ಫ್ಯೂ ನಡುವೆಯೇ ಹೋರಾಟ ತೀವ್ರ ಸ್ವರೂಪ ಪಡೆದಿತ್ತು. ಸಚಿವರ ಮನೆಗಳನ್ನು ಸಹ ಪ್ರತಿಭಟನಾಕಾರರು ಸುತ್ತುವರಿದಿದ್ದರು. ಇದರಿಂದ ಕಂಗಾಲಾದ ಲಂಕಾದ ಮಂತ್ರಿಗಳು ಆರ್ಥಿಕ ಸಂಕಷ್ಟಕ್ಕೆ ಪರಿಹಾರ ಕಂಡುಕೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಕೊಲಂಬೋದಲ್ಲಿರುವ ಅಧ್ಯಕ್ಷ ರಾಜಪಕ್ಸೆ ಅವರ ನಿವಾಸದ ಬಳಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಪ್ರತಿಭಟನಾಕಾರರು ವಾಹನಗಳಿಗೆ ಬೆಂಕಿಯಿಟ್ಟು ದಾಂಧಲೆ ಎಬ್ಬಿಸಿದ್ದರು. ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ. ಲಂಕಾದಲ್ಲಿ ಇಂಧನ ಹಾಗೂ ಅಡುಗೆ ಅನಿಲದ ಕೊರತೆ ತೀವ್ರವಾಗಿದೆ. ವಿದ್ಯುತ್ ಪೂರೈಕೆಯಾಗ್ತಿಲ್ಲ. ದಿನಕ್ಕೆ 13 ಗಂಟೆಗಳ ಕಾಲ ವಿದ್ಯುತ್ ಕಡಿತ ಮಾಡ್ತಿರೋದು ಸಾರ್ವಜನಿಕರಿಗೆ ತೀವ್ರ ಸಮಸ್ಯೆ ಉಂಟುಮಾಡಿದೆ.
ತುರ್ತು ಪರಿಸ್ಥಿತಿ ಘೋಷಣೆಯಾಗಿ 2 ವಾರಗಳೊಳಗೆ ಸಂಸತ್ತಿನಲ್ಲಿ ಅನುಮೋದನೆ ಪಡೆಯಬೇಕಿತ್ತು. ಆದ್ರೆ ಈ ಬಗ್ಗೆ ಚರ್ಚೆಯಾಗಬೇಕೆಂದು ಪ್ರತಿಪಕ್ಷಗಳು ಪಟ್ಟು ಹಿಡಿದಿದ್ದವು. ಸಂಸತ್ತಿನಲ್ಲಿ ಅನುಮೋದನೆ ದೊರೆಯುವ ಸಾಧ್ಯತೆ ಕಡಿಮೆಯಾಗಿದ್ದರಿಂದ ಅಧ್ಯಕ್ಷ ರಾಜಪಕ್ಸ ತುರ್ತುಪರಿಸ್ಥಿತಿ ಘೋಷಣೆಯನ್ನೇ ಹಿಂಪಡೆದಿದ್ದಾರೆ.