ಬೆಂಗಳೂರು: ಬಿಟ್ ಕಾಯಿನ್ ಆರೋಪಿ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನ ಪರಿಚಯವಿದ್ದದ್ದು ನಿಜ. ಆದರೆ ಬಿಜೆಪಿ ನಾಯಕರು ನನ್ನ ವಿರುದ್ಧ ಮಾಡುತ್ತಿರುವ ಆರೋಪಗಳು ಸುಳ್ಳು ಎಂದು ಯುವ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ ಮೊಹಮ್ಮದ್ ನಲಪಾಡ್ ತಿಳಿಸಿದ್ದಾರೆ.
ಬಿಟ್ ಕಾಯಿನ್ ಹಗರಣದಲ್ಲಿ ಮೊಹಮ್ಮದ್ ನಲಪಾಡ್ ಭಾಗಿಯಾಗಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ನಲಪಾಡ್, ಶ್ರೀಕಿ ಪರಿಚಯವಿದ್ದದ್ದು ನಿಜ. ಆದರೆ ಆತನೊಂದಿಗೆ ಯಾವುದೇ ಬಿಟ್ ಕಾಯಿನ್ ವ್ಯವಹಾರದಲ್ಲಿ ಭಾಗಿಯಾಗಿಲ್ಲ. ನನ್ನ ಹಾಗೂ ಆತನ ಸಂಬಂಧ ವಿದ್ವತ್ ಮೇಲಿನ ಗಲಾಟೆ ಪ್ರಕರಣಕ್ಕೆ ಮಾತ್ರ ಸೀಮಿತವಾಗಿತ್ತು. ಅದರ ಬಳಿಕ ನನಗೂ ಶ್ರೀಕಿಗೂ ಯಾವುದೇ ಸ್ನೇಹವಿಲ್ಲ ಎಂದು ತಿಳಿಸಿದ್ದಾರೆ.
ಟಿಕ್ಕಿ ರಸಗುಲ್ಲಾ ಸವಿದು ಮುಖ ಕಿವುಚಿದ ಫುಡ್ ಬ್ಲಾಗರ್…!
ಬಿಟ್ ಕಾಯಿನ್ ಹ್ಯಾಕ್ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಬಿಜೆಪಿ ನಾಯಕರು ಅನಗತ್ಯವಾಗಿ ಆರೋಪ ಮಾಡುತ್ತಿದ್ದಾರೆ. ಒಂದು ವೇಳೆ ಈ ಹಗರಣದಲ್ಲಿ ನಾನು ಭಾಗಿಯಾಗಿದ್ದರೆ ನನ್ನನ್ನು ಬಂಧಿಸಲಿ. ನಾನು ತಪ್ಪು ಮಾಡಿದ್ದರೆ ಇಷ್ಟೊತ್ತಿಗೆ ನನ್ನನ್ನು ಬಂಧಿಸುತ್ತಿದ್ದರು. ಅವರದ್ದೇ ಸರ್ಕಾರ ಇರುವಾಗ ಸುಮ್ಮನಿರುತ್ತಿದ್ದರೇ ಎಂದು ಪ್ರಶ್ನಿಸಿದ್ದಾರೆ.
2018 ರಲ್ಲಿಯೇ ಕೊನೇ ಅದಾದ ಬಳಿಕ ಶ್ರೀಕಿಯೊಂದಿಗೆ ಯಾವುದೇ ಸಂಬಂಧವಿಲ್ಲ. ಶ್ರೀಕಿ ಹ್ಯಾಕರ್ ಎಂಬುದು ಮಾಧ್ಯಮಗಳ ಮೂಲಕ ಗೊತ್ತಾಗುತ್ತಿದ್ದಂತೆಯೇ ಆತನಿಂದ ಅಂತರ ಕಾಯ್ದುಕೊಂಡಿದ್ದೇನೆ. ಆತನೊಂದಿಗೆ ಯಾವುದೇ ವ್ಯವಹಾರಗಳೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಜನಪರ ಕೆಲಸಗಳನ್ನು ಮಾಡುತ್ತಿರುವವನು. ಜನವರಿಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸುತ್ತಿದ್ದೇನೆ. ಹಾಗಾಗಿ ಅದನ್ನು ತಪ್ಪಿಸಲು ಕೆಲವರಿಂದ ಇಂತಹ ತಂತ್ರ ನಡೆದಿರಬಹುದು ಎಂದರು.