ತನ್ನ ಪುತ್ರಿ ಶೀನಾ ಬೋರಾ ಬದುಕಿದ್ದಾಳೆಂದೂ ಈ ಸಂಬಂಧ ತನಿಖೆ ನಡೆಸಬೇಕೆಂದು ಕೋರಿ ಆರೋಪಿ ಇಂದ್ರಾಣಿ ಮುಖರ್ಜಿ ಸಲ್ಲಿಸಿರುವ ಅರ್ಜಿಗೆ ಉತ್ತರ ನೀಡಲು ಸಿಬಿಐ ವಿಶೇಷ ನ್ಯಾಯಾಲಯದ ಬಳಿ ಕೇಂದ್ರೀಯ ತನಿಖಾ ದಳವು 14 ದಿನಗಳ ಸಮಯಾವಕಾಶವನ್ನು ಕೋರಿದೆ ಎನ್ನಲಾಗಿದೆ.
ಶೀನಾ ಬೋರಾ ಬದುಕಿದ್ದಾರಾ ಇಲ್ಲವಾ ಎನ್ನುವುದರ ಬಗ್ಗೆ ಉತ್ತರ ನೀಡಲು ವಿಶೇಷ ನ್ಯಾಯಾಲಯವು ಸಿಬಿಐಗೆ ಇಂದಿನವರೆಗೆ ಕಾಲವಕಾಶ ನೀಡಿತ್ತು.
ಶೀನಾ ಬೋರಾ ಬದುಕಿರುವ ಬಗ್ಗೆ ತನಿಖೆಗೆ ಕೋರಿ ಇಂದ್ರಾಣಿ ಮುಖರ್ಜಿ ಸಲ್ಲಿಸಿದ ಅರ್ಜಿಗೆ ಯಾವುದೇ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಅವರು ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದರು. 49 ವರ್ಷದ ಆರೋಪಿಯು ತಾನು ನವೆಂಬರ್ 25ರಂದು ಬೈಕುಲ್ಲಾ ಜೈಲಿನಲ್ಲಿ ಕೈದಿಯನ್ನು ಭೇಟಿಯಾಗಿದ್ದಾಗಿ ಹೇಳಿಕೊಂಡಿದ್ದಾರೆ.
ಇಂದ್ರಾಣಿ ಮುಖರ್ಜಿ ಹೇಳುವ ಪ್ರಕಾರ, ಸುಲಿಗೆ ಆರೋಪದ ಮೇಲೆ ಬಂಧಿಸಲ್ಪಟ್ಟ ನಂತರ ಬೈಕುಲ್ಲಾ ಜೈಲಿನಲ್ಲಿ ತನ್ನ ಜೊತೆಯಿದ್ದ ಆಶಾ ಕೊರ್ಕೆ ಕಳೆದ ವರ್ಷ ಜೂನ್ 21ರಂದು ಶ್ರೀನಗರದ ದಾಲ್ ಸರೋವರದ ಬಳಿಯಲ್ಲಿ ಶೀನಾರನ್ನು ಭೇಟಿಯಾಗಿದ್ದೇನೆಂದು ಹೇಳಿಕೊಂಡಿದ್ದಾರೆ ಎಂದು ಹೇಳಿದ್ದಾರೆ.