ಫ್ಲೈಟ್ ಕ್ಯಾಟರಿಂಗ್ ಸೇವೆಗೆ ಕರ್ನಾಟಕ ಹಾಲು ಮಹಾಮಂಡಳಿ ಹಾಗೂ ಹಾಸನ ಹಾಲು ಒಕ್ಕೂಟದ ವತಿಯಿಂದ ನಂದಿನಿ ಗುಡ್‌ಲೈಫ್ ಸುವಾಸಿತ ಹಾಲು, ಮಜ್ಜಿಗೆ, ಲಸ್ಸಿ ಮತ್ತು ಮಿಲ್ಕ್ ಶೇಕ್ ಪೆಟ್ ಬಾಟಲ್ ಸರಬರಾಜು ಮಾಡಲಾಗಿದೆ. ಹೀಗಾಗಿ ಶೀಘ್ರದಲ್ಲಿಯೇ ರೈಲು ಹಾಗೂ ವಿಮಾನಗಳಲ್ಲಿ ಕುಳಿತು ನೀವು ನಂದಿನಿ ಉತ್ಪನ್ನಗಳನ್ನು ಸವಿಯಬಹುದಾಗಿದೆ.
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ವಿಸ್ತಾರ ಹಾಗೂ ಏರ್ ಇಂಡಿಯಾ ವಿಮಾನಗಳಲ್ಲಿ ನಿಮಗೆ ನಂದಿನಿಯ ಉತ್ಪನ್ನಗಳು ದೊರೆಯಲಿವೆ. ಇತರ ಭಾರತೀಯ ರೈಲ್ವೆಗೆ ಹಾಸನ ಹಾಲು ಒಕ್ಕೂಟ ಹಾಲಿನ ಉತ್ಪನ್ನಗಳನ್ನು ಪೂರೈಕೆ ಮಾಡಿದೆ.
ಹಾಸನದಲ್ಲಿ 5 ವಾಹನಗಳಲ್ಲಿ 75 ಸಾವಿರ ಲೀಟರ್ ಹಾಲನ್ನು ಸರಬರಾಜು ಮಾಡಲಾಗಿದೆ. ಮುಂಬಯಿ, ಚೆನ್ನೈ, ಪುಣೆ ಮತ್ತು ಬೆಂಗಳೂರು ರೈಲ್ವೆ ಕೇಟರಿಂಗ್ ಡಿಪೋಗಳಿಗೆ ಈ ಹಾಲು ಸರಬರಾಜಾಗಲಿವೆ. ಬೇಸಿಗೆಯ ಅವಧಿಯ ಬಳಿಕ ಹಾಲಿನ ಸರಬರಾಜನ್ನು ಹೆಚ್ಚಿಸಲಾಗುವುದು ಎಂದು ಕೆಎಂಎಫ್ ಮಾಹಿತಿ ನೀಡಿದೆ.
ಲೇಹ್ ಹಾಗೂ ಲಡಾಖ್ವರೆಗೂ ನಮ್ಮ ಕೆಎಂಎಫ್ ಉತ್ಪನ್ನಗಳು ವಿಸ್ತರಿಸಿವೆ. ಎಲ್ಲೆಡೆ ಗ್ರಾಹಕರು ನಂದಿನಿ ಉತ್ಪನ್ನಗಳಿಗೆ ಮೆಚ್ಚುಗೆ ನೀಡಿದ್ದಾರೆ. ಬಾದಾಮಿ, ಪಿಸ್ತಾ, ಸ್ಟ್ರಾಬೆರಿ ಸುವಾಸಿತ ಹಾಲು, ಮಾವಿನ ಹಣ್ಣಿನ ಲಸ್ಸಿ, ಸಾದಾ ಲಸ್ಸಿ, ಚಾಕೋಲೇಟ್, ವೆನಿಲ್ಲಾ, ಬನಾನಾ ಮಿಲ್ಕ್ ಶೇಕ್, ಹೀಗೆ ಹಲವು ಉತ್ಪನ್ನಗಳನ್ನು ಹೊರ ರಾಜ್ಯಗಳಲ್ಲಿಯೂ ಮಾರಾಟ ಮಾಡುತ್ತಿದ್ದೇವೆಂದು ಕೆಎಂಎಫ್ ಮಾಹಿತಿ ನೀಡಿದೆ.