ಹರಿಯಾಣ ಸರ್ಕಾರ ಈಗ ಅವಿವಾಹಿತರಿಗೂ ಪಿಂಚಣಿ ನೀಡಲು ಸಿದ್ಧತೆ ನಡೆಸಿದೆ. ಈ ಬಗ್ಗೆ ಒಂದು ತಿಂಗಳೊಳಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿದೆ. ಈ ಯೋಜನೆಯಡಿ ಇನ್ನೂ ಮದುವೆಯಾಗದವರಿಗೆ ಅನೇಕ ಪ್ರಯೋಜನಗಳನ್ನು ನೀಡಲಾಗುತ್ತದೆ. ಇದೊಂದು ಅಪರೂಪದ ಪಿಂಚಣಿ ಯೋಜನೆ. 45 ರಿಂದ 60 ವರ್ಷ ವಯೋಮಾನದ ಅವಿವಾಹಿತರಿಗೆ ಪಿಂಚಣಿ ದೊರೆಯುತ್ತದೆ. ಇದರಲ್ಲಿ ಮಹಿಳೆಯರು ಮತ್ತು ಪುರುಷರು ಇಬ್ಬರೂ ಪ್ರಯೋಜನ ಪಡೆಯುತ್ತಾರೆ.
ಯೋಜನೆಯ ಅನುಮೋದನೆಯ ನಂತರ ಪಿಂಚಣಿ ಮೊತ್ತವೆಷ್ಟು? ಅದರಲ್ಲಿರೋ ಇತರ ಲಾಭಗಳೇನು ಎಂಬ ಎಲ್ಲಾ ಮಾಹಿತಿ ಲಭ್ಯವಾಗಲಿದೆ. ಪಿಂಚಣಿದಾರರು ಹರಿಯಾಣದ ನಿವಾಸಿಯಾಗಿರಬೇಕು. ಇದಲ್ಲದೆ ಅವರ ಆದಾಯ ವಾರ್ಷಿಕವಾಗಿ 1.80 ಲಕ್ಷಕ್ಕಿಂತ ಹೆಚ್ಚಿರಬಾರದು. ಈ ಯೋಜನೆ ಜಾರಿಯಿಂದ ರಾಜ್ಯದ 1.25 ಲಕ್ಷ ಜನರು ಪಿಂಚಣಿ ಪ್ರಯೋಜನ ಪಡೆಯಲಿದ್ದಾರೆ ಎನ್ನಲಾಗುತ್ತಿದೆ.
ಪ್ರಸ್ತುತ ಹರಿಯಾಣ ಸರ್ಕಾರವು ವೃದ್ಧಾಪ್ಯ, ವಿಧವೆಯರಿಗೆ, ಅಂಗವಿಕಲರಿಗೆ ಪಿಂಚಣಿ ನೀಡುತ್ತಿದೆ. ವೃದ್ಧಾಪ್ಯ ಪಿಂಚಣಿ ಯೋಜನೆಯಡಿ ವೃದ್ಧರಿಗೆ ಮೂರು ಸಾವಿರ ರೂಪಾಯಿ ದೊರೆಯುತ್ತದೆ. ಅವಿವಾಹಿತರಿಗೂ ಇದೇ ಮೊತ್ತ ಸಿಗುವ ನಿರೀಕ್ಷೆ ಇದೆ. ಸದ್ಯದಲ್ಲೇ ವಿಧುರರಿಗೂ ಪಿಂಚಣಿ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.