ಶಿವಮೊಗ್ಗ: ಬಜರಂಗ ದಳ ಕಾರ್ಯಕರ್ತ ಹರ್ಷ ಹತ್ಯೆ ಬೆನ್ನಲ್ಲೇ ಶಿವಮೊಗ್ಗದಲ್ಲಿ ಉಂಟಾಗಿದ್ದ ಗಲಭೆ ಪ್ರಕರಣಕ್ಕೆ ಕಾನೂನು ಸುವ್ಯವಸ್ಥೆ ವಿಚಾರ ಕಾರಣಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ಗಾವಣೆಗೆ ಒತ್ತಾಯಗಳು ಕೇಳಿಬಂದಿದ್ದು, ಜಿಲ್ಲೆಯ ಪೊಲೀಸ್ ಇಲಾಖೆಗೆ ಸರ್ಜರಿ ಮಾಡಲು ಗೃಹ ಸಚಿವ ಅರಗ ಜ್ಞಾನೇಂದ್ರ ಮುಂದಾಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಶಿವಮೊಗ್ಗ ಘಟನೆಗೆ ಜಿಲ್ಲಾ ಪೊಲೀಸ್ ವೈಫಲ್ಯ ಆರೋಪ ವಿಚಾರವಾಗಿ ಮಾತನಾಡುತ್ತಾ, ಶಿವಮೊಗ್ಗವನ್ನು ರೌಡಿಗಳ ಬ್ರೀಡಿಂಗ್ ಸೆಂಟರ್ ಎಂದು ಕರೆಯುತ್ತಿದ್ದಾರೆ. ಇದರಿಂದ ಜಿಲ್ಲೆಯ ಜನರಾದ ನಾವು ತಲೆತಗ್ಗಿಸುವಂತಾಗಿದೆ. ಕೆಟ್ಟ ಶಕ್ತಿಗಳ ಜತೆ ಕೈಜೋಡಿಸಿರುವ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಂಥಹ ಪೊಲೀಸ್ ಅಧಿಕಾರಿಗಳ ವಿಚಾರಣೆ ಆರಂಭವಾಗಿದೆ ಎಂದು ಹೇಳಿದರು.
BIG NEWS: ಬೇಸಿಗೆ ರಜೆಯಲ್ಲಿ ಮಹತ್ತರ ಬದಲಾವಣೆ; ಶೈಕ್ಷಣಿಕ ವರ್ಷವೂ ಬೇಗನೇ ಆರಂಭ
ಶಿವಮೊಗ್ಗ ಎಸ್ ಪಿ ಬಿ. ಎಂ. ಲಕ್ಷ್ಮಿಪ್ರಸಾದ್ ವರ್ಗಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದು ಕೇವಲ ವದಂತಿ. ಅವರೊಬ್ಬ ಉತ್ತಮ ಅಧಿಕಾರಿ. ವರ್ಗಾವಣೆ ಮಾಡುವ ಉದ್ದೇಶವಿಲ್ಲ. ಆದರೆ ಜಿಲ್ಲಾ ಪೊಲೀಸ್ ಇಲಾಖೆಗೆ ಸರ್ಜರಿ ನಡೆಸುತ್ತೇವೆ ಎಂದು ಖಚಿತಪಡಿಸಿದರು.
ಹರ್ಷ ಹತ್ಯೆ ಹಂತಕರಿಗೆ ಶೀಘ್ರದಲ್ಲಿ ಶಿಕ್ಷೆಯಾಗಲಿದೆ. ನ್ಯಾಯಾಲಯದಲ್ಲಿ ವಿಚಾರಣೆ ಕೂಡ ತ್ವರಿತಗತಿಯಲ್ಲಿ ನಡೆಯುವಂತೆ ನೋಡಿಕೊಳ್ಳುತ್ತೇವೆ ಎಂದು ತಿಳಿಸಿದರು.