ಶಿವಮೊಗ್ಗ: ವೀರ ಸಾವರ್ಕರ್ ಫ್ಲೆಕ್ಸ್ ಅಳವಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾದ ಗಲಾಟೆ ಹಿನ್ನಲೆಯಲ್ಲಿ ಶಿವಮೊಗ್ಗ ನಗರ ವ್ಯಾಪ್ತಿಗೆ ಒಳಪಡುವ ಎಲ್ಲಾ ಪ್ರದೇಶಗಳಲ್ಲಿ ಭಾರಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು.
ನಿನ್ನೆ ಮಧ್ಯಾಹ್ನ ನಡೆದ ಘಟನೆಯ ನಂತರ ಶಿವಮೊಗ್ಗಕ್ಕೆ ಆಗಮಿಸಿ ಮೊಕ್ಕಾಂ ಹೂಡಿರುವ ಅವರು ನಿನ್ನೆಯಿಂದಲೇ ವಿವಿಧ ಪ್ರದೇಶಗಳಿಗೆ ಭೇಟಿ ಪರಿಸ್ಥಿತಿ ಅವಲೋಕನ ಮಾಡಿದ್ದಾರೆ. ನಿನ್ನೆ ಇರಿತಕ್ಕೊಳಗಾಗಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರೇಮ್ ಸಿಂಗ್ ನನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ಬುದ್ದಿವಂತರ ಜಿಲ್ಲೆ. ಹಲವಾರು ಸಾಹಿತಿಗಳನ್ನು ಮತ್ತು ಮುಖ್ಯಮಂತ್ರಿಗಳನ್ನು ನೀಡಿದ ಜಿಲ್ಲೆಯಾಗಿದ್ದು ಸಮಾಜವಾದದ ಗೋಪಾಲಗೌಡರ ತವರೂರಾಗಿದೆ. ಇಲ್ಲಿಯ ಜನ ಯಾವುದೇ ಅಹಿತಕರ ಘಟನೆಗಳಿಗೆ ಕಿವಿಗೊಡದೇ ಶಾಂತಿ ಕಾಪಾಡಬೇಕು. ಈಗಾಗಲೇ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಸುರಕ್ಷತೆ ದೃಷ್ಠಿಯಿಂದ ಅಂಗಡಿ ಮುಂಗಟ್ಟುಗಳನ್ನು ಕೂಡ ಬಂದ್ ಮಾಡಿಸಲಾಗಿದೆ ಎಂದರು.
ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪೂರ್ವ ವಲಯ ಐಜಿಪಿ ತ್ಯಾಗರಾಜ್, ಹಿಂದೆ ಇಲ್ಲೇ ಅಡಿಷನಲ್ ಎಸ್ಪಿಯಾಗಿ ಕಾರ್ಯನಿರ್ವಹಿಸಿದ ಶೇಖರ್, ಹಿರಿಯ ಅಧಿಕಾರಿಗಳ ತಂಡವೇ ಇಡೀ ನಗರದ ಉಸ್ತುವಾರಿ ಕೈಗೊಂಡಿದೆ. 8 ಕೆ.ಎಸ್.ಆರ್.ಪಿ., 10 ಡಿಎಆರ್, 1 ಆರ್.ಎ.ಎಫ್. ತುಕಡಿಯನ್ನು ನಿಯೋಜಿಸಲಾಗಿದ್ದು, ಇನ್ನೂ ಹೆಚ್ಚಿನ ಭದ್ರತೆಗೆ ಹೊರ ಜಿಲ್ಲೆಯಿಂದ ಪೊಲೀಸ್ ಸಿಬ್ಬಂದಿ ಕರೆಸಲಾಗುತ್ತಿದೆ. ಈಗಾಗಲೇ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಪಥಸಂಚಲನ ನಡೆಸಿ ನಾಗರಿಕರಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗಿದೆ ಎಂದರು.
ಇರಿತಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರನ್ನು ಬಂಧಿಸಿದ್ದು, ನಿನ್ನೆ ರಾತ್ರಿ ಖಚಿತ ಮಾಹಿತಿ ಮೇರೆಗೆ ಪ್ರಕರಣದಲ್ಲಿ ಭಾಗಿಯಾದ ಪ್ರಮುಖ ಆರೋಪಿ ಜಬೀವುಲ್ಲಾನನ್ನು ಬಂಧಿಸುವಾಗ ಆತ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾದ ಹಿನ್ನಲೆಯಲ್ಲಿ ವಿನೋಬನಗರ ಠಾಣೆ ಪಿಎಸ್ಐ ಮಂಜುನಾಥ ಕುರಿ ಫೈರಿಂಗ್ ಮಾಡಿ ಬಂಧಿಸಿ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದರು.